ಜಿಲ್ಲೆಗೆ ಗೌಡರ ಕೊಡುಗೆ ಏನು ಅಂತ ಹೇಳಲಿ

21-pnp 1
ಪಾಂಡವಪುರ ತಾಲೂಕಿನ ರೈಲ್ವೆ ನಿಲ್ದಾಣದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಕ್ಷದ ಅಭ್ಯರ್ಥಿ ಪರ ಮತಯಾಚಿಸಿದರು. ಶಾಸಕ ಪಿ.ನರೇಂದ್ರಸ್ವಾಮಿ, ಎಚ್.ತ್ಯಾಗರಾಜು, ಬಿ.ರೇವಣ್ಣ ಇತರರು ಇದ್ದರು.
Published on

ಪಾಂಡವಪುರ: ಜಿಲ್ಲೆಗೆ ಯಾರು ಬೇಕಾದರೂ ಬರಬಹುದು, ಏನೂ ಬೇಕಾದರೂ ಮಾಡಬಹುದು ಎಂಬ ಭಾವನೆ ಎಚ್.ಡಿ.ಕುಮಾರಸ್ವಾಮಿ ಮತ್ತು ಎಚ್.ಡಿ.ದೇವೇಗೌಡರ ಮನಸ್ಸಿನಲ್ಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದರು.

ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಶನಿವಾರ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಪರ ಮತಯಾಚಿಸಿ ಮಾತನಾಡಿದರು. ರಾಮನಗರ ನನ್ನ ಕರ್ಮಭೂಮಿ ಎನ್ನುತ್ತಿದ್ದ ಕುಮಾರಸ್ವಾಮಿ ಅವರು ಅಲ್ಲಿ ತಮ್ಮ ಭಾಮೈದನಿಗೆ ಬಿಜೆಪಿಯಿಂದ ನಿಲ್ಲಿಸಿ ಕ್ಷೇತ್ರ ಬಿಟ್ಟುಕೊಟ್ಟಿದ್ದಾರೆ. ಮಂಡ್ಯದಲ್ಲಿ ಮಾತ್ರ ಜೆಡಿಎಸ್ ಗಟ್ಟಿಯಾಗಿದೆ ಎಂದು ಇಲ್ಲಿಗೆ ಬಂದಿದ್ದಾರೆ. ಮಂಡ್ಯ ನನ್ನದು ಎನ್ನುತ್ತಾರೆ. ಜಿಲ್ಲೆಗೆ ಅವರ ಕೊಡುಗೆ ಏನು ಅಂತ ಹೇಳಲಿ. ಇಲ್ಲಿಗೆ ಬಂದು ಜಾತಿ, ರೈತರ ಹೆಸರೇಳಿಕೊಂಡು ಕಣ್ಣೀರು ಸುರಿಸಿ ಮತ ಕೇಳುತ್ತಾರೆ. ಮತದಾರರು ಇವರ ಮಾತಿಗೆ ಮರುಳಾಗಬಾರದು. ಎಚ್‌ಡಿಕೆ ಜೆಡಿಎಸ್ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನ ಮಾಡಿದ್ದಾರೋ ಅಥವಾ ಮಾರಾಟ ಮಾಡಿದ್ದಾರೋ ಗೊತ್ತಿಲ್ಲ ಎಂದು ಕುಹಕವಾಡಿದರು.

ರೈತರಿಗೆ ಒಳ್ಳೆಯದಾಗಲಿ, ಯುವಕರಿಗೆ ಉದ್ಯೋಗ, ಮಹಿಳಾ ಸಬಲೀಕರಣ ಸೇರಿದಂತೆ ಅನೇಕ ವಿಚಾರಗಳ ಆಧಾರದ ಮೇಲೆ ಕಾಂಗ್ರೆಸ್ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ಕೈಗೊಂಡಿತ್ತು. ಹೆಚ್ಚುವರಿ ನೀರನ್ನು ಶೇಖರಿಸಿಟ್ಟುಕೊಂಡು ಬೆಂಗಳೂರು ನಗರಕ್ಕೆ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಮೇಕೆದಾಟು ಹೋರಾಟ ಮಾಡಲಾಯಿತು. ಯಾವುದೇ ಹೋರಾಟಗಳಿಗೆ ಜೆಡಿಎಸ್ ಬೆಂಬಲ ನೀಡಲಿಲ್ಲ. ಈಗ ಅಪ್ಪ ಮಕ್ಕಳು ಬಿಜೆಪಿಯನ್ನು ತಬ್ಬಾಡುತ್ತಿದ್ದಾರೆ. ಮಂಡ್ಯ ಜನತೆ ಯಾಮಾರದೆ ಸ್ವಾಭಿಮಾನದಿಂದ ಮತ ಚಲಾಯಿಸುತ್ತಾರೆ. ರಾಜ್ಯದ ಇತಿಹಾಸದಲ್ಲೇ ಯಾವ ಸರ್ಕಾರಗಳು ನೀಡದ ಐದು ಗ್ಯಾರಂಟಿಗಳನ್ನು ಕಾಂಗ್ರೆಸ್ ನೀಡಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರು ಮತ್ತು ಯುವಕರಿಗೆ ವಾರ್ಷಿವಾಗಿ ಒಂದು ಲಕ್ಷ, ಎಂಎಸ್‌ಪಿ ಮತ್ತು ಸ್ವಾಮಿನಾಥನ್ ವರದಿ ಜಾರಿಗೊಳಿಸುತ್ತದೆ ಎಂದು ಭರವಸೆ ನೀಡಿದರು.

ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ಜಾರಿಗೊಳಿಸಿದ ಐದು ಗ್ಯಾರಂಟಿಗಳಿಂದ ಬರಗಾಲದಲ್ಲಿ ಜನರ ಕುಟುಂಬ ನಿರ್ವಹಣೆಗೆ ಸಹಕಾರವಾಗಿದೆ. ಈಗಿನ ಪ್ರಣಾಳಿಕೆಯಲ್ಲಿ ರೈತರ ಸಾಲಮನ್ನಾ ಮತ್ತು ಎಂಎಸ್‌ಪಿ ಜಾರಿಗೊಳಿಸುವುದಾಗಿ ಭರವಸೆ ನೀಡಲಾಗಿದೆ. ಇದರಿಂದ ರೈತರ ಬದುಕು ಹಸನಾಗುತ್ತದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿದಂತೆ ಸ್ಟಾರ್ ಚಂದ್ರು ಅವರಿಗೆ ಹೆಚ್ಚಿನ ಬಹುಮತ ನೀಡಬೇಕು ಎಂದು ಮನವಿ ಮಾಡಿದರು.

ವೀರಶೈವ ಮುಖಂಡ ಮಂಡಿಬೆಟ್ಟಹಳ್ಳಿ ಮಂಜುನಾಥ್ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು. ಮಳವಳ್ಳಿ ಶಾಸಕ ಪಿ.ನರೇಂದ್ರಸ್ವಾಮಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ತ್ಯಾಗರಾಜು, ಮುಖಂಡರಾದ ಬಿ.ರೇವಣ್ಣ, ರೈತ ಸಂಘದ ಎಸ್.ದಯಾನಂದ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net