

ವಿಜಯವಾಣಿ ಸುದ್ದಿಜಾಲ ಧಾರವಾಡ
ಹಿರಿಯ ರಂಗಭೂಮಿ ಕಲಾವಿದ, ನಿರ್ದೇಶಕ, ಚಲನಚಿತ್ರ ನಟ, ಗಾಯಕರೂ ಆಗಿದ್ದ ಬಸವರಾಜ ಮನಸೂರ ಹೆಸರನ್ನು ಚಿರಸ್ಥಾಯಿಗೊಳಿಸಲು ಸರ್ಕಾರ ಚಿಂತನೆ ನಡೆಸಬೇಕು ಎಂದು ಜೀವನ ಶಿಕ್ಷಣ ಮಾಸಪತ್ರಿಕೆ ನಿವೃತ್ತ ಸಂಪಾದಕ ಗುರುಮೂರ್ತಿ ಯರಗಂಬಳಿಮಠ ಆಗ್ರಹಿಸಿದ್ದಾರೆ.
ನಗರದ ಆಲೂರು ವೆಂಕಟರಾವ್ ಭವನದಲ್ಲಿ ಬಸವರಾಜ ಮನಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಡಾ.ಎಸ್.ಎಸ್. ಜೀವಣ್ಣವರ ಎಜ್ಯುಕೇಷನಲ್ ಟ್ರಸ್ಟ್ ಆಶ್ರಯದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕಲಾ ರಂಗೋತ್ಸವ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರಳ, ಸಜ್ಜನಿಕೆಯ ಬಸವರಾಜ ಮನಸೂರ ತಮ್ಮ ಬದುಕನ್ನೇ ರಂಗಭೂಮಿಗೆ ಸಮರ್ಪಿಸಿಕೊಂಡಿದ್ದರು. ತಾವು ಅಭಿನಯಿಸಿದ ಎಲ್ಲ ಪಾತ್ರಗಳಿಗೂ ಜೀವ ತುಂಬುತ್ತಿದ್ದ ಅವರು, ಅಭಿನಯದಲ್ಲಿ ನಿಜಕ್ಕೂ ನಟಶೇಖರರೇ ಆಗಿದ್ದರು. ಆರ್ಥಿಕ ಹಿನ್ನೆಡೆಯೂ ಸೇರಿ ಜೀವನದ ಅನೇಕ ನೋವುಗಳನ್ನು ನುಂಗಿಕೊಂಡು ಸದಾ ಹಸನ್ಮುಖಿಯಾಗಿ ಇತರರನ್ನು ನಗಿಸಿ ಖುಷಿ ಪಡಿಸುತ್ತಿದ್ದರು ಎಂದರು.
ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಬಸವರಾಜ ಮನಸೂರ ಮತ್ತು ಮಲ್ಲಿಕಾರ್ಜುನ ಮನಸೂರ ಸಹೋದರರ ಕಲೆಯ ನೆನಹು ಇಂದಿಗೂ ಹಸಿರಾಗಿದ್ದು, ಪ್ರತಿ ವರ್ಷ ರಂಗೋತ್ಸವದ ಮೂಲಕ ಇವರ ಸ್ಮರಣೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಮಹಾದೇವಪ್ಪ ದಂಡಿನ, ಉದ್ಯಮಿ ಸಿದ್ದಣ್ಣ ಪೂಜಾರ, ಅಶೋಕ ಮಾಳಣ್ಣವರ, ಮನಸೂರ ಗ್ರಾಪಂ ಅಧ್ಯಕ್ಷ ಕರೆಪ್ಪ ಎತ್ತಿನಗುಡ್ಡ, ಶಾಂತೇಶ ಚಿಕ್ಕಲಕಿ, ಇತರರು ಇದ್ದರು.