

ಶಿರಸಿ: ಮನುಷ್ಯನು ತನ್ನ ಅಂತ್ಯಕಾಲದಲ್ಲಿ ಭಗವಂತನ ಸ್ಮರಣೆ ಮಾಡಿದರೆ ಭಗವಂತನಂತೆ ಚಿನ್ಮಯ ಶರೀರ ಪಡೆಯಬಹುದು. ಇಂತಹ ಹರಿಗುರುಗಳ ದೊಡ್ಡ ಅನುಗ್ರಹ ಸಂಪಾದಿಸಿದವರು ಶ್ರೀ ವಿಶ್ವೋತ್ತಮ ತೀರ್ಥರು ಎಂದು ಉಡುಪಿ ಅಷ್ಟ ಮಠಗಳಲ್ಲಿ ಒಂದಾದ ಸೋದೆ ವಾದಿರಾಜ ಮಠಾಧೀಶ ಶ್ರೀ ವಿಶ್ವ ವಲ್ಲಭ ತೀರ್ಥ ಶ್ರೀಪಾದರು ಬಣ್ಣಿಸಿದರು.
ಸೋದೆ ವಾದಿರಾಜ ಮಠದಲ್ಲಿ ಶ್ರೀ ವಿಶ್ವೋತ್ತಮ ತೀರ್ಥರ 16ನೇ ಆರಾಧನಾ ಪ್ರಯುಕ್ತ ಶ್ರೀ ಭಾವಿಸಮೀರ ಗುರುಕುಲದ ವಿದ್ಯಾರ್ಥಿಗಳಿಂದ ಮಂಗಳವಾರ ಆಯೋಜಿಸಿದ್ದ ಶಾಸ್ತ್ರೀಯ ಸಂವಾದದ ಬಳಿಕ ಆರಾಧನಾ ಸಂದೇಶ ನೀಡಿದರು.
ಮನುಷ್ಯ ಅಂತ್ಯಕಾಲದಲ್ಲಿ ಯಾವ ಸ್ಮರಣೆಯಿಂದ ದೇಹತ್ಯಾಗ ಮಾಡುವನೋ ಮುಂದೆಯೂ ಅದೇ ಭಾವವನ್ನು ಹೊಂದುವನು ಎಂದು ಶ್ರೀಕೃಷ್ಣ ಗೀತೆಯಲ್ಲಿ ಹೇಳಿದ್ದಾನೆ. ಇದಕ್ಕೆ ಉದಾಹರಣೆ ಭಾಗವತದಲ್ಲಿ ಬರುವ ಭರತ ಚಕ್ರವರ್ತಿಯ ಕಥೆ. ವೈರಾಗ್ಯಭಾವ ತಾಳಿ ಭರತನು ಎಲ್ಲವನ್ನೂ ತ್ಯಾಗ ಮಾಡಿ ತಪಸ್ಸು ಮಾಡಲು ಗಂಡಕೀ ತೀರಕ್ಕೆ ಬಂದರೆ ಅಲ್ಲಿ ಜಿಂಕೆ ಮರಿಯ ಸಂಗವಾಗಿ ಅದರಿಂದ ಮೋಹಿತನಾಗಿ ತನ್ನ ಅಂತ್ಯಕಾಲದಲ್ಲೂ ಜಿಂಕೆಯ ಸ್ಮರಣೆಯನ್ನೇ ಮಾಡಿದ ಫಲವಾಗಿ ಮುಂದಿನ ಜನ್ಮದಲ್ಲಿ ಜಿಂಕೆಯಾಗಿಯೇ ಹುಟ್ಟಿದ ಎಂದರು.
ಇಂಥ ಕಾರಣಗಳಿಗೆ ಮನುಷ್ಯ ಅಂತ್ಯಕಾಲದಲ್ಲಿ ಭಗವಂತನ ನಾಮಸ್ಮರಣೆ ಮಾಡಬೇಕು ಎಂದು ಶಾಸ್ತ್ರಗಳು ಸಾರಿವೆ. ವಿಶ್ವೋತ್ತಮ ತೀರ್ಥರಂಥವರ ದರ್ಶನ ಭಾಗ್ಯವೇ ನಮ್ಮ ಜೀವನದ ಸುಕೃತ ಎಂದರು. ಇದಕ್ಕೂ ಮುನ್ನ ವಿದ್ವಾಂಸರಾದ ನಿಪ್ಪಾಣಿ ಗುರುರಾಜ ಆಚರ್ಯರು ಗುರು ಸ್ಮರಣೆ ಮಾಡಿದರು. ದಿವಾನರಾದ ಪಾಡಿಗಾರು ಶ್ರೀನಿವಾಸ ತಂತ್ರಿಗಳು, ಮಧುಸೂದನ ಪುತ್ರಾಯರು, ಇತರರು ಉಪಸ್ಥಿತರಿದ್ದರು.