ಸಾಹಿತ್ಯ ವಿದ್ಯಾರ್ಥಿಗಳು ತಯಾರಾಗಲಿ

mysore
Published on

ಮೈಸೂರು: ಸಾಹಿತ್ಯ ವಿದ್ಯಾರ್ಥಿಗಳನ್ನು ತಯಾರು ಮಾಡುವ ಹೊಣೆಗಾರಿಕೆ ಬೋಧಕರ ಮೇಲಿದೆ ಎಂದು ಕವಿ, ವಿಮರ್ಶಕ ಬಾಲಸುಬ್ರಹ್ಮಣ್ಯ ಕಂಜರ್ಪಣೆ ಹೇಳಿದರು.


ಪದವಿ ಪೂರ್ವ ಕಾಲೇಜು ಕನ್ನಡ ಉಪನ್ಯಾಸಕರ ವೇದಿಕೆ ವತಿಯಿಂದ ಲಕ್ಷ್ಮೀಪುರಂನ ಗೋಪಾಲಸ್ವಾಮಿ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ಡಾ.ಸಂತೋಷ್ ಚೊಕ್ಕಾಡಿ ಅವರ ‘ಅರ್ಥವಿದೆಯೆ ವಿದಾಯಕ್ಕೆ’ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.


ಪ್ರಸ್ತುತ ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೃಷ್ಟಿಯಾಗುತ್ತಿದ್ದಾರೆ. ಇವರಿಗೆ ಕನ್ನಡದ ಕುರಿತು ನಿರ್ಲಕ್ಷೃ, ಅಸಡ್ಡೆ ಬೆಳೆಯುತ್ತಿದೆ. ಬಹುತೇಕ ಇಂಗ್ಲಿಷ್ ಮಾಧ್ಯಮದ ಮಕ್ಕಳಿಗೆ ಕನ್ನಡ ಸರಿಯಾಗಿ ಬರುವುದಿಲ್ಲ. ಇದು ಕನ್ನಡತನಕ್ಕೆ ಪೆಟ್ಟು ಕೊಡಲಿದೆ ಎಂದು ಕಳವಳ ವ್ಯಕ್ತಪಡಿಸಿದರು.


ಹಳೇ ತಲೆಮಾರಿನ ಸಾಹಿತಿಗಳು, ಸಾಹಿತ್ಯ ಪರಂಪರೆಯನ್ನು ಯುವ ತಲೆಮಾರಿನವರು ಸ್ಮರಿಸಿಕೊಳ್ಳುತ್ತಿಲ್ಲ. ಹಳೆತು ಇಲ್ಲವಾದರೆ, ಹೊಸತು ಇರುವುದಿಲ್ಲ. ಇತಿಹಾಸ ಅಭದ್ರವಾಗಿದ್ದರೆ ಇತಿಹಾಸವನ್ನು ಸೃಷ್ಟಿ ಮಾಡಲು ಆಗಲ್ಲ. ಆದ್ದರಿಂದ ಹಳೇ ಸಾಹಿತ್ಯ, ಸಾಹಿತಿಗಳ ಕುರಿತು ಓದಬೇಕು, ಅರ್ಥೈಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.


ಶಿಕ್ಷಣ ವ್ಯವಸ್ಥೆಯಲ್ಲಿ ಬೋಧಕರ ಕೊರತೆ ಸೃಷ್ಟಿಯಾಗಿದೆ. ಅತಿಥಿ ಶಿಕ್ಷಕರು ಹೆಚ್ಚಾಗಿ ಕಾಯಂ ಶಿಕ್ಷಕರು ಕಡಿಮೆಯಾಗಿದ್ದಾರೆ. ಹೀಗಾದರೆ ಶಿಕ್ಷಣ ವ್ಯವಸ್ಥೆ ಸರಿಯಾಗಿ ನಡೆಯಲು ಸಾಧ್ಯವೇ? ಎಂದು ಪ್ರಶ್ನಿಸಿದರು.


ವೃತ್ತಿಯೊಂದಿಗೆ ಸಾಹಿತ್ಯ ಅಭಿರುಚಿಯನ್ನೂ ಬೆಳೆಸಿಕೊಳ್ಳಬೇಕು. ವೃತ್ತಿಯೊಂದಿಗೆ ಈ ರೀತಿ ಪ್ರವೃತ್ತಿಯಲ್ಲಿ ಜೀವನದಲ್ಲಿ ಹೊಸತನ, ಸೂಕ್ಷ್ಮತೆ, ಸಂವೇದನೆ ಕಾಯ್ದುಕೊಳ್ಳಲು ಸಾಧ್ಯವಾಗಲಿದೆ. ನವ ಚಿಂತನೆಗಳು ಮೂಡಲು ಸಹ ಪ್ರೇರಣೆಯಾಗಲಿದೆ ಎಂದರು.


ಮಹಾರಾಜ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಡಾ.ವಿಜಯಲಕ್ಷ್ಮೀ, ಲೇಖಕ ವಿಕ್ರಂ ಚದುರಂಗ, ಗೋಪಾಲಸ್ವಾಮಿ ಶಿಕ್ಷಣ ಸಂಸ್ಥೆಯ ಕರೆಸ್ಪಾಂಡೆಂಟ್ ಎನ್.ಆರ್.ಮಂಜುನಾಥ್, ಕವಿ ಡಾ.ಸಂತೋಷ ಚೊಕ್ಕಾಡಿ, ವೇದಿಕೆ ಅಧ್ಯಕ್ಷ ಡಾ.ನೀ.ಗೂ.ರಮೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net