

ಕಂಪ್ಲಿ: ತಾಲೂಕಿನ ಮೆಟ್ರಿ ಗ್ರಾಮದ ಶ್ರೀರಾಮಲಮ್ಮ ದೇವಸ್ಥಾನದ ಬಯಲು ವೇದಿಕೆಯಲ್ಲಿ, ಸ್ನೇಹಜೀವಿ ಸಾಮಾಜಿಕ ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಘ, ಶ್ರೀಚನ್ನದಾಸರ ಯುವಕರ ಕ್ಷೇಮಾಭಿವೃದ್ಧಿ ಸಂಘಗಳ ಆಶ್ರಯದಲ್ಲಿ ಶನಿವಾರ ಸಂಗೀತ ಉತ್ಸವ ಕಾರ್ಯಕ್ರಮ ನಡೆಯಿತು.
ಕನ್ನಡ ಫಿಲಂ ಚೇಂಬರ್ ಸದಸ್ಯ ಹಾಗೂ ರಂಗ ಕಲಾವಿದ ಮೆಟ್ರಿ ಕೆ.ಶಂಕರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಗರುಡಗಂಬದೊಡನೆ ಶಂಖ, ಜಾಗಟೆ ಹಿಡಿದು ಚನ್ನದಾಸರು ಮನೆಮನೆಗೆ ತೆರಳಿ ಭಿಕ್ಷಾಟನೆ ಮೂಲಕ ಜೀವನ ಸಾಗಿಸುತ್ತಿದ್ದಾರೆ. ಇವರ ಜೀವನ ಸುಧಾರಣೆಗೆ ಸರ್ಕಾರ ಮಾಸಾಶನ ನೀಡುವ ಜೊತೆಗೆ ಯೋಜನೆಗಳನ್ನು ರೂಪಿಸಬೇಕು ಎಂದರು.
ಸಂಘದ ಅಧ್ಯಕ್ಷ ಕೆ.ನಾಗರಾಜ ಮಾತನಾಡಿ, ಗ್ರಾಮೀಣ ಕಲಾವಿದರನ್ನು ಗುರುತಿಸಿ ಅವರ ಕಲಾ ಪೋಷಣೆಗೆ ವೇದಿಕೆ ಒದಗಿಸುವಲ್ಲಿ ಸ್ಥಳೀಯ ಸಂಸ್ಥೆ, ಪ್ರಗತಿಪರ ಸಂಘಟನೆಗಳು ಮುಂದಾಗಬೇಕು ಎಂದರು. ರಾಷ್ಟ್ರಮಟ್ಟದ ಕ್ರೀಡಾಪಟು ಸಿ.ಡಿ.ಚಿನ್ನರಾಜು ಇತರರು ಮಾತನಾಡಿದರು.
ಸಿ.ಡಿ.ಮೌನೇಶ ತಂಡ, ದೊಡ್ಡ ಮಾರೆಪ್ಪ ತಂಡ, ಸಿ.ಡಿ.ಲಕ್ಷ್ಮಣ ತಂಡದವರು ತತ್ವಪದ, ದಾಸರ ಪದಗಳನ್ನು, ಕುಂಬಾರ ತಿಮ್ಮಪ್ಪ ತಂಡದವರು ರಂಗಗೀತೆಗಳನ್ನು, ಕುಂಬಾರ ರಂಗಪ್ಪ ತಂಡದವರು ಭಜನಾ ಗೀತೆ ಹಾಡಿದರು.