ಕಿಡಿಗೇಡಿ ವಿರುದ್ಧ ಕಾನೂನು ಕ್ರಮವಾಗಲಿ

2
ಗುಡಿಬಂಡೆಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ತಾಲೂಕು ಬೈರೇಗೌಡ ಒಕ್ಕಲಿಗರ ಸಂಘದ ಅಧ್ಯಕ್ಷ ಎಚ್.ಎನ್.ಮಂಜುನಾಥ್ ರೆಡ್ಡಿ, ಖಜಾಂಚಿ ಪಿ.ಎ.ನಾಗರಾಜರೆಡ್ಡಿ, ನಿರ್ದೇಶಕರಾದ ಆದಿನಾರಾಯಣರೆಡ್ಡಿ, ಎಂ.ವಿ.ಶಿವಣ್ಣ ಹಾಗೂ ಪರಿಮಳಾ ಇತರರಿದ್ದರು.
Published on

ಬೈರೇಗೌಡ ಒಕ್ಕಲಿಗರ ಸಂಘದ ಅಧ್ಯಕ್ಷ ಮಂಜುನಾಥ್‌ರೆಡ್ಡಿ ಆಗ್ರಹ - ನಾಡಪ್ರಭು ಕೆಂಪೇಗೌಡರ ವಿರುದ್ಧ ಅವಹೇಳನಕಾರಿ ಹೇಳಿಕೆಗೆ ಆಕ್ರೋಶ

ಗುಡಿಬಂಡೆ: ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರಿಗೆ ಚಪ್ಪಲಿ ಹಾರ ಹಾಕುತ್ತೇವೆ ಎಂದು ಅವಹೇಳನಕಾರಿ ಹೇಳಿಕೆ ನೀಡಿರುವ ಕಿಡಿಗೇಡಿ ವಿರುದ್ದ ಕಾನೂನು ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತಾಲೂಕು ಬೈರೇಗೌಡ ಒಕ್ಕಲಿಗರ ಸಂಘದ ಅಧ್ಯಕ್ಷ ಎಚ್.ಎನ್.ಮಂಜುನಾಥ್ ರೆಡ್ಡಿ ಆಕ್ರೋಶ ಹೊರಹಾಕಿದರು. ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಮುಂದಿರುವ ಸರ್ಕಾರಿ ಜಾಗದಲ್ಲಿ ಈ ಭಾಗಕ್ಕೆ ಕೊಡುಗೆ ನೀಡಿರುವ ಮಹಾನ್ ನಾಯಕ ಹಾವಲಿ ಬೈರೇಗೌಡ ಅವರ ಪುತ್ಥಳಿ ನಿರ್ಮಾಣ ಮಾಡಬೇಕೆಂದು 5 ವರ್ಷಗಳಿಂದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಸಂಘ ಮನವಿ ಮಾಡುತ್ತಿದೆ. ಕಾನೂನು ವ್ಯಾಪ್ತಿಯಲ್ಲೇ ಸ್ಥಳ ಪಡೆದು ಪುತ್ಥಳಿ ನಿರ್ಮಾಣ ಸಂಘದ ಉದ್ದೇಶವಾಗಿದೆ. ಆದರೆ, ಬಲಿಜ ಸಮುದಾಯದವರು ಕಾನೂನುಬಾಹಿರವಾಗಿ ಶ್ರೀ ಕೈವಾರ ತಾತಯ್ಯ ಅವರ ಪುತ್ಥಳಿ ನಿರ್ಮಾಣಕ್ಕೆ ಭೂಮಿಪೂಜೆ ಮಾಡಲು ಮುಂದಾಗಿ, ನಾಡಪ್ರಭು ಕೆಂಪೇಗೌಡರ ಕುರಿತು ಅವಹೇಳನವಾಗಿ ಹೇಳಿಕೆ ನೀಡಿದ್ದಾರೆ. ಕೂಡಲೇ ಈ ಹೇಳಿಕೆಯನ್ನು ಹಿಂಪಡೆಯಬೇಕು ಹಾಗೂ ಇಂತಹ ಹೇಳಿಕೆ ನೀಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.

ಸಂಘದ ಖಜಾಂಚಿ ಪಿ.ಎ.ನಾಗರಾಜರೆಡ್ಡಿ, ನಿರ್ದೇಶಕರಾದ ಆದಿನಾರಾಯಣರೆಡ್ಡಿ, ಎಂ.ವಿ.ಶಿವಣ್ಣ, ಮುಖಂಡರಾದ ಎಚ್.ಎನ್.ಮಂಜುನಾಥರೆಡ್ಡಿ, ರಾಜಾರೆಡ್ಡಿ, ಪ್ರಕಾಶ್ ಹಾಜರಿದ್ದರು.

ಸರ್ಕಾರಿ ಜಾಗಕ್ಕೆ ನಕಲಿ ದಾಖಲೆ

ಸಮುದಾಯದ ಮುಖಂಡ ಎಚ್.ಪಿ. ರಾಮನಾಥ್ ಮಾತನಾಡಿ, ಸರ್ಕಾರಿ ಜಾಗಕ್ಕೆ ನಕಲಿ ದಾಖಲೆ ಸೃಷ್ಟಿಸಿ ಖಾಸಗಿ ಜಾಗ ಎಂದು ಹೇಳಿದರೆ ಯಾರು ನಂಬುವುದಿಲ್ಲ. ಈಗಾಗಲೇ ಬಿ-ಖರಾಬು ಜಾಗ ಎಂದು ನಮೂದಾಗಿದೆ. ಸರ್ಕಾರದ ಜಾಗವನ್ನು ಖಾಸಗಿ ಜಾಗ ಎನ್ನಲಾಗುತ್ತಿದೆ. ಈಗಾಗಲೇ ಪಪಂನಿಂದ ಅನುದಾನ ಬಳಸಿ ಆ ಜಾಗದ ಸುತ್ತ ಕಾಂಪೌಂಡ್ ನಿರ್ಮಾಣ ಮಾಡಲಾಗಿದೆ. ಖಾಸಗಿ ಜಾಗಕ್ಕೆ ಕಾಂಪೌಂಡ್ ನಿರ್ಮಾಣ ಸಾಧ್ಯವಿಲ್ಲ. ಕಾನೂನು ವ್ಯವಸ್ಥೆ ಹದಗೆಡಿಸಲು ಕೆಲವರು ಇಂತಹ ಕೆಲಸ ಮಾಡಿದ್ದಾರೆ. ಈ ಭಾಗಕ್ಕೆ ಕೊಡುಗೆ ನೀಡಿರುವ ವ್ಯಕ್ತಿಯ ಪುತ್ಥಳಿ ನಿರ್ಮಾಣ ಅವಕಾಶ ಕೇಳಿದ್ದೇವೆ. ಇದಕ್ಕೆ ಅನುಮತಿ ನೀಡಬೇಕೆಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net