ಕಲಿಕೆ ಪಠ್ಯಕ್ಕೆ ಸೀಮಿತವಾಗದಿರಲಿ - ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಹೇಳಿಕೆ

VJP-20-4
ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿವಿ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 2022ನೇ ಸಾಲಿನ ವಾರ್ಷಿಕ ದಿನಾಚರಣೆ ಕಾರ್ಯಕ್ರಮದಲ್ಲಿ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿದರು. ಡಾ.ವನಿತಾ ತೊರವಿ, ಪ್ರೊ.ಬಿ.ಕೆ.ತುಳಸಿಮಾಲ ಇತರರಿದ್ದರು.
Published on

ವಿಜಯಪುರ: ಪ್ರತಿ ಮನುಷ್ಯನಲ್ಲಿಯೂ ತನ್ನದೇ ಆದ ಸಾಮರ್ಥ್ಯ ಇದ್ದೇ ಇರುತ್ತದೆ. ಅದನ್ನು ಹೊರತರುವ ಜವಾಬ್ದಾರಿ ಶಿಕ್ಷಣದ್ದು. ನಮ್ಮ ಸಾಂಪ್ರದಾಯಿಕ ಶಿಕ್ಷಣ ಪದ್ಧತಿಯಲ್ಲಿ ಇದಕ್ಕೆ ಅವಕಾಶವಿತ್ತು. ಆದರೆ ಪ್ರಸ್ತುತ ಶಿಕ್ಷಣ ಪದ್ಧತಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರ ತರುವ ಬದಲು ಅವರ ಒಳಗೆ ಪಠ್ಯಗಳನ್ನು ಮಾತ್ರ ತುಂಬುತ್ತಿದೆ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಇಲ್ಲಿನ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ 2022ನೇ ಸಾಲಿನ ವಾರ್ಷಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ನಾವು ಅರಿಯಬೇಕಾದದ್ದು ಜೀವನ ವಿಜ್ಞಾನವನ್ನು ಆದರೆ ನಮ್ಮ ಶಿಕ್ಷಣ ಪದ್ಧತಿ ಕೇವಲ ಪಠ್ಯಗಳಿಗೆ ಸೀಮಿತವಾಗಿದೆ. ವಿದ್ಯಾರ್ಥಿಗಳು ಪ್ರಶ್ನಿಸುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು. ಬ್ರಿಟಿಷರು ನಮ್ಮ ಶೈಕ್ಷಣಿಕ ಪದ್ಧತಿ ಮತ್ತು ಅಧ್ಯಾತ್ಮ ಸಂಸ್ಕೃತಿಯನ್ನು ನಾಶ ಮಾಡಲು ಯತ್ನಿಸಿದರು. ಆದರೆ ಅವರಿಗೆ ನಮ್ಮೊಳಗೆ ಹರಿಯುವ ರಕ್ತವನ್ನು ನಾಶ ಮಾಡಲು ಸಾಧ್ಯವಿಲ್ಲ. ಗಾರ್ಗಿಯ ಬುದ್ಧಿವಂತಿಕೆ, ಕುಂತಿಯ ತಾಳ್ಮೆಯ ಶಕ್ತಿ ನಮ್ಮ ರಕ್ತದೊಳಗೆ ಬಂದಿದೆ. ಭಾರತೀಯ ನಾರಿಯರಿಗೆ ಹೆಜ್ಜೆ ಹೆಜ್ಜೆಗೂ ಕಷ್ಟವನ್ನು ಸಹಿಸಿಕೊಳ್ಳಬಲ್ಲ ವಿಶೇಷ ಶಕ್ತಿ ಇದೆ ಎಂದು ಹೇಳಿದರು.

ಮಕ್ಕಳ ಹಕ್ಕುಗಳ ಅಂತಾರಾಷ್ಟ್ರೀಯ ರಾಯಭಾರಿ ಡಾ.ವನಿತಾ ತೊರವಿ ಮಾತನಾಡಿ, ಮಕ್ಕಳಿಗೆ ಮತ್ತು ಯುವಕರಿಗೆ ಪ್ರೇರಣೆ ನೀಡಿ ಅವರನ್ನು ಬೆಳೆಸಬೇಕು. ಅವರಿಂದಲೇ ರಾಷ್ಟ್ರ ನಿರ್ಮಾಣ ಸಾಧ್ಯ. ನಿಷ್ಠೆ, ಪರಿಶ್ರಮದಿಂದ ಯಶಸ್ಸು ಸಾಧ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿನಿಯರು ಸೈನಿಕರಂತೆ ತಯಾರಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ ಮಾತನಾಡಿ, ವಿವಿಯಲ್ಲಿ ಈ ಎರಡು ವರ್ಷಗಳ ಕಾಲ ನೀವು ಪಡೆದ ಅರ್ಥಪೂರ್ಣ ಜ್ಞಾನ, ಕೌಶಲ್ಯ, ಸಾಮರ್ಥ್ಯವನ್ನು ನಾಳೆಯ ನಿಮ್ಮ ವೃತ್ತಿ ಜೀವನವನ್ನು ಕಟ್ಟಿಕೊಳ್ಳಲು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಿ. ಆದ್ಯತೆಗಳನ್ನು ಅರಿತು ಅದಕ್ಕೆ ತಕ್ಕಂತೆ ವೇಳಾಪಟ್ಟಿ ತಯಾರಿಸಿ ಕಾರ್ಯಗಳನ್ನು ನಿರ್ವಹಿಸಿದಾಗ ಮಾತ್ರ ವೈಯಕ್ತಿಕ ಹಾಗೂ ವೃತ್ತಿ ಜೀವನ ಎರಡನ್ನೂ ನಿಭಾಯಿಸಲು ಸಾಧ್ಯ ಎಂದರು.

ಕುಲಸಚಿವ ಪ್ರೊ.ಬಿ.ಎಸ್.ನಾವಿ, ಮೌಲ್ಯಮಾಪನ ಕುಲಸಚಿವ ಪ್ರೊ.ರಮೇಶ ಕೆ. ಉಪಸ್ಥಿತರಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ವತಿಯಿಂದ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಬೋಧಕ, ಬೋಧಕೇತರ, ಸಂಶೋಧನೆ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು.

ಸಂಗೀತ ವಿಭಾಗದ ವಿದ್ಯಾರ್ಥಿನಿಯರು ನಾಡಗೀತೆ ಹಾಗೂ ಮಹಿಳಾ ಗೀತೆಯನ್ನು ಹಾಡಿದರು. ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ನಿರ್ದೇಶಕಿ ಪ್ರೊ.ವಿಜಯಾ ಕೋರಿಶೆಟ್ಟಿ ಸ್ವಾಗತಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ಸಹಾಯಕ ನಿರ್ದೇಶಕಿ ಅಶ್ವಿನಿ ಕೆ.ಎನ್.ವಿಶೇಷ ವಾರ್ಷಿಕ ವರದಿ ಮಂಡಿಸಿದರು. ಮುಖ್ಯ ನಿಲಯಪಾಲಕಿ ಡಾ.ಜ್ಯೋತಿ ಉಪಾಧ್ಯೆ ವಸತಿ ನಿಲಯದ ವರದಿ ವಾಚನ ಮಾಡಿದರು. ಕ್ರೀಡಾ ನಿರ್ದೇಶನಾಲಯದ ನಿರ್ದೇಶಕ ಪ್ರೊ.ಡಿ.ಎಂ.ಜ್ಯೋತಿ ಕ್ರೀಡಾ ನಿರ್ದೇಶನಾಲಯದ ವರದಿ ವಾಚಿಸಿದರು. ಶಿಕ್ಷಣ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಭಾರತಿ ಗಾಣಿಗೇರ ಬಹುಮಾನ ವಿತರಣೆ ಕಾರ್ಯಕ್ರಮ ನಡೆಸಿಕೊಟ್ಟರು. ಸಹಾಯಕ ಪ್ರಾಧ್ಯಾಪಕಿ ಡಾ.ಸವಿತಾ ಹುಲಮನಿ ವಂದಿಸಿದರು. ಸಮಾಜಶಾಸ್ತ್ರ ಅಧ್ಯಯನ ವಿಭಾಗದ ಸಹಪ್ರಾಧ್ಯಾಪಕ ಡಾ.ಎಂ.ಪಿ.ಬಳಿಗಾರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net