-'ಜ್ಞಾನದ ಜತೆ ಜತೆಗೆ ಕಲಿಕೆ ನಿರಂತರವಾಗಿ ಸಾಗಲಿ'

20
Published on

ಮೈಸೂರು: ಜ್ಞಾನಕ್ಕಿಂತ ಮಿಗಿಲಾದುದು ಜಗತ್ತಿನಲ್ಲಿ ಯಾವುದೂ ಇಲ್ಲ. ಜ್ಞಾನದ ಜತೆ ಜತೆಗೆ ಕಲಿಕೆ ನಿರಂತರವಾಗಿ ಸಾಗಬೇಕು. ಆ ಮೂಲಕ ನಿಮ್ಮ ಕನಸುಗಳನ್ನು ಸಕಾರಗೊಳಿಸಿಕೊಳ್ಳಬಹುದು ಎಂದು ಹಿರಿಯ ಆಯುರ್ವೇದ ತಜ್ಞ ವೈದ್ಯ ಡಾ. ಗುರುಬಸವರಾಜು ಅಭಿಪ್ರಾಯಪಟ್ಟರು.

ನಗರದ ಜ್ಞಾನಬುತ್ತಿ ಸಂಸ್ಥೆಯಿಂದ ಆಯೋಜಿಸಿದ್ದ ಎಸ್.ಎಸ್.ಸಿ ಮತ್ತು ಬ್ಯಾಂಕಿಂಗ್ ಹುದ್ದೆಗಳ ಪರೀಕ್ಷೆಗಳಿಗೆ 60 ದಿನಗಳ ಉಚಿತ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸೋಮವಾರ ಅಧ್ಯಯನ ಸಾಮಗ್ರಿ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಕಳೆದ ಐವತ್ತು ವರ್ಷಗಳ ಹಿಂದೆ ನಾವು ಓದುತ್ತಿದ್ದ ಕಾಲದಲ್ಲಿ ಇಷ್ಟೊಂದು ಸೌಲಭ್ಯಗಳು ಮತ್ತು ಮಾರ್ಗದರ್ಶನ ಮಾಡುವ ಸಂಸ್ಥೆಗಳು ಇರಲಿಲ್ಲ. ಜತೆಗೆ ಬಡತನ ಮತ್ತು ಕಷ್ಟದ ಜೀವನದಲ್ಲಿ ವಿದ್ಯಾಭ್ಯಾಸ ಮಾಡಬೇಕಿತ್ತು. ಆದರೆ ಇಂದು ಈ ಕಾಲದಲ್ಲಿರುವ ನೀವೇ ಪುಣ್ಯವಂತರು. ಡಿಜಿಟಲ್, ಎಐ, ನ್ಯಾನೋ ಮುಂತಾದ ತಂತ್ರಜ್ಞಾನ ಯುಗದಲ್ಲಿ ಇದ್ದೀರಾ. ಸಾಧನೆ ಮಾಡಲು ಇನ್ನೇನು ಬೇಕು? ಎಂದು ಪ್ರಶ್ನಿಸಿದರು.

ಕೆಲವರು ತಂತ್ರಜ್ಞಾನವನ್ನು ತೆಗಳುತ್ತಾರೆ. ಅದು ತಪ್ಪು. ಅದನ್ನು ನಮ್ಮ ಸಾಧನೆಗೆ ಹೇಗೆ ಬಳಸಿಕೊಳ್ಳಬೇಕೆಂದು ಅರಿತರೆ ಅದ್ಭುತಗಳನ್ನು ಸೃಷ್ಟಿಸಿ ಸಾಧಿಸಬಹುದು. ಶೆಲ್ಲಿ ಎಂಬ ಆಂಗ್ಲ ಕವಿ ‘ಸ್ಮಾಲ್ ಇಸ್ ಬ್ಯೂಟಿಪುಲ್’ ಎನ್ನುವಂತೆ ಜ್ಞಾನಬುತ್ತಿ ಸಂಸ್ಥೆ ನೋಡಲು ಅತ್ಯಂತ ಚಿಕ್ಕದಾಗಿದ್ದರೂ ಸಾಧನೆಯಲ್ಲಿ ಯಾವ ವಿಶ್ವವಿದ್ಯಾನಿಲಯಕ್ಕೂ ಕಡಿಮೆಯಿಲ್ಲ ಎಂದರು. ಗುರಿ ಮುಟ್ಟುವತನಕ ಜ್ಞಾನದ ತೃಷೆ ಆರದಂತೆ ನೋಡಿಕೊಳ್ಳಬೇಕು. ಹೀಗಾಗಬೇಕಾದರೆ ಜ್ಞಾನಿಗಳೊಂದಿಗೆ ಹೆಚ್ಚಿನ ಒಡನಾಡ ಇಟ್ಟುಕೊಳ್ಳಿ ಎಂದು ಸಲಹೆ ನೀಡಿದರು.

ಹಿರಿಯ ರಾಜ್ಯಶಾಸ್ತ್ರ ವಿದ್ವಾಂಸರಾದ ಪ್ರೊ.ಎಚ್.ಎಂ. ರಾಜಶೇಖರ್ ಮಾತನಾಡಿ, ಸ್ಪರ್ಧಾತ್ಮಕ ಯಗಕ್ಕೆ ಬರಲು ಧೈರ್ಯವಿರಬೇಕು. ಅಡೆತಡೆಗೆ ಚಿಂತಿಸಬೇಡಿ. ನಿರಂತರ ಶ್ರಮದ ಬೆನ್ನೆತ್ತಿದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ವಿದ್ಯಾರ್ಥಿಗಳು ಸಕಾರಾತ್ಮಕವಾಗಿ ಚಿಂತಸಬೇಕು. ಆಗ ಮಾತ್ರ ನಿಮ್ಮ ಗುರಿ ತಲುಪುವ ದಾರಿ ಸುಗಮವಾಗುತ್ತದೆ. ಜತೆಗೆ ಆತ್ಮವಿಶ್ವಾಸ ಮುಖ್ಯವಾಗುತ್ತದೆ. ಬ್ಯಾಂಕಿಂಗ್ ಕ್ಷೇತ್ರ ಉತ್ತಮ ಚೇತರಿಕೆ ಕಂಡಿದೆ. ಸಕಾರಾತ್ಮಕ ಚಿಂತನೆ ಜತೆಗೆ ನಿರಂತರ ಓದು ಹಾಗೂ ವಿಮರ್ಶಾತ್ಮಕವಾಗಿರಬೇಕು ಎಂದರು.

ಪುರಾತತ್ವ ಮತ್ತು ಪರಂಪರೆ ಇಲಾಖೆ ಆಯುಕ್ತ ಎ.ದೇವರಾಜು ಮಾತನಾಡಿ, ಜ್ಞಾನಬುತ್ತಿ ಸಂಸ್ಥೆಗೆ ನೀವು ಸೇರಿದರೆ ಅರ್ಧ ಯಶಸ್ಸು ಪಡೆದಂತೆಯೇ. ಅಸಂಖ್ಯಾತ ವಿದ್ಯಾರ್ಥಿಗಳು ಜ್ಞಾನಬುತ್ತಿಯ ಪ್ರಯೋಜನ ಪಡೆದು ಜೀವನ ರೂಪಿಸಿಕೊಂಡಿದ್ದಾರೆ. ಕಳೆದ 4 ದಶಕಗಳಿಂದ ವಿದ್ಯಾರ್ಥಿಗಳಿಗೆ ಜ್ಞಾನವನ್ನು ತುಂಬಿತ್ತಿರುವ ಜ್ಞಾನಬುತ್ತಿ ಸಂಸ್ಥೆಯ ಸೇವೆ ಅವಿಸ್ಮರಣೀಯವಾದದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಿದ್ಧತೆಯ ಹಾದಿ ಜಟಿಲವಿದ್ದರೂ ಗುರಿ ತಲುಪಬೇಕು. ಯಶಸ್ಸಿನಲ್ಲಿ ಬೇರೆಯವರ ಯೋಚನೆ ಬೇಡ. ಒಂದು ಲಕ್ಷ ಮಂದಿ ಪರೀಕ್ಷೆ ಬರೆದು ನೂರು ಜನ ಅಯ್ಕೆಯಾಗುತ್ತಾರೆ ಎಂದರೆ ಅವರ ಶ್ರಮ ನಿರಂತರವಿರುತ್ತದೆ. ನಿಮ್ಮ ಪಠ್ಯಕ್ರಮವನ್ನು ಪುನಃ ಪುನಃ ತಿರುವಿಹಾಕುತ್ತಿರಿ ಎಂದು ಸಲಹೆ ನೀಡಿದರು.

ಹಿರಿಯ ಸಹಕಾರಿ ಮತ್ತು ಶಿಕ್ಷಣ ತಜ್ಞ ವೈ.ಎನ್. ಶಂಕರೇಗೌಡ ಅಧ್ಯಕ್ಷತೆ ವಹಿಸಿ ಶಿಬಿರಾರ್ಥಿಗಳಿಗೆ ಶುಭ ಕೋರಿದರು. ಜ್ಞಾನಬುತ್ತಿ ಪ್ರಧಾನ ಕಾರ್ಯದರ್ಶಿ ಜೈನಹಳ್ಳಿ ಸತ್ಯನಾರಾಯಣಗೌಡ, ಕಾರ್ಯದರ್ಶಿ ಎಚ್.ಬಾಲಕೃಷ್ಣ, ಸಂಪನ್ಮೂಲ ವ್ಯಕ್ತಿಗಳಾದ ಪ್ರೊ. ಕೃ.ಪ.ಗಣೇಶ, ಕಿರಣ್ ಕೌಶಿಕ್, ಯು.ಎಂ. ಶರದ್ ರಾವ್, ಎಂ.ರಾಜೀವ್ ಶರ್ಮ, ಎಸ್.ರಾಧಾಕೃಷ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net