

ಬ್ಯಾಡಗಿ: ನ್ಯಾಯಾಲಯದಲ್ಲಿ ಸೈಬರ್ ಕಾನೂನು ತಿಳಿವಳಿಕೆ ಹೊಂದಲು ವಕೀಲರು ಹೊಸ ತಂತ್ರಜ್ಞಾನದ ಅಧ್ಯಯನ ಕೈಗೊಂಡು, ವೃತ್ತಿ ಕೌಶಲ ಹೆಚ್ಚಿಸಿಕೊಳ್ಳಬೇಕು ಎಂದು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಆರ್. ನಟರಾಜ್ ಹೇಳಿದರು.
ಪಟ್ಟಣದ ನ್ಯಾಯಾಲಯದಲ್ಲಿ ನ್ಯಾಯವಾದಿಗಳ ಸಂಘ ಹಾಗೂ ವಕೀಲರ ಪರಿಷತ್ ಆಶ್ರಯದಲ್ಲಿ ಶನಿವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಕಾನೂನು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಸೈಬರ್ ಕಾನೂನು ಸಾಕಷ್ಟು ಜಟಿಲತೆಯಿಂದ ಕೂಡಿದ್ದು, ಗೂಗಲ್, ಫೇಸ್ಬುಕ್, ವೆಬ್ ಆವರಿಸಿದೆ. ಡಾರ್ಕ್ವೆಬ್ ಮೂಲಕ ಹೆಚ್ಚು ಸೈಬರ್ ಅಪರಾಧ ನಡೆಯುತ್ತಿವೆ. ಮೊಬೈಲ್ ಫೋನ್, ಸಿಮ್ ವ್ಯಕ್ತಿಯ ಫೋಟೋ ಬಳಸಿಕೊಂಡು ಡ್ರೋನ್ ಮೂಲಕ ಭಯಾನಕ ಕೃತ್ಯಗಳನ್ನು ನಡೆಸಬಹುದಾಗಿದೆ. ತಾಂತ್ರಿಕತೆ ಬಳಕೆ ಹೆಚ್ಚಾಗುತ್ತಿದ್ದಂತೆ ಅಪರಾಧಗಳ ಸಂಖ್ಯೆ ಗಣನೀಯವಾಗಿದೆ ಎಂದರು.
ಈ ಹಿಂದೆ ಇಲೆಕ್ಟ್ರಾನಿಕ್ ದಾಖಲೆಗಳು ಲಭ್ಯವಾದರೂ ಸಾಕ್ಷ್ಯಕೊರತೆ ಎದ್ದು ಕಾಣುತ್ತಿತ್ತು. ಇದಕ್ಕಾಗಿ ತಿದ್ದುಪಡಿ ಮೂಲಕ 2000ರಲ್ಲಿ ಐಟಿ ಆಕ್ಟ್ ಜಾರಿಗೆ ಬಂದಿದೆ. ದಾಖಲೆಗಳನ್ನು ಖಚಿತಪಡಿಸಲು 65ಎ ಹಾಗೂ ದಾಖಲೆಗಳನ್ನು 65ಬಿ ಮೂಲಕ ಸಾಕ್ಷ್ಯ ನೀಡುವ ಮುನ್ನ ಪ್ರಮಾಣ ಪತ್ರ ಪಡೆದು ಸಲ್ಲಿಸಬೇಕು ಎಂದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಯಾದವ ವನಮಾಲಾ ಆನಂದರಾವ್ ಮಾತನಾಡಿ, ವಕೀಲರು ನಿರಂತರವಾಗಿ ಅಧ್ಯಯನಶೀಲರಾಗುವ ಮೂಲಕ ಜ್ಞಾನ ಹೆಚ್ಚಿಸಿಕೊಳ್ಳಬೇಕಿದೆ. ಸ್ವಾತಂತ್ರ್ಯ ಚಳವಳಿಯಲ್ಲಿ ವಕೀಲರ ಪಾತ್ರ ತೀವ್ರ ಪರಿಣಾಮ ಬೀರಿತ್ತು. ಸಾರ್ವಜನಿಕರಿಗೆ ನ್ಯಾಯ ಕೊಡಿಸುವಲ್ಲಿ ವಕೀಲರ ಪಾತ್ರ ಹಿರಿದಾಗಿದೆ. ವೃತ್ತಿ ಕೌಶಲ ಹೆಚ್ಚಿಸಿಕೊಳ್ಳಲು ನಿತ್ಯ ಉಚ್ಚ ಹಾಗೂ ಸವೋಚ್ಚ ನ್ಯಾಯಾಲಯ ನೀಡುವ ತೀರ್ಪಗಳನ್ನು ತಿಳಿದುಕೊಳ್ಳಬೇಕು ಎಂದರು.
ನ್ಯಾಯವಾದಿಗಳ ಸಂಘದ ತಾಲೂಕು ಅಧ್ಯಕ್ಷ ಶಂಕರ ರ್ಬಾ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ದಿವಾಣಿ ನ್ಯಾಯಾಧೀಶ ಎಸ್.ಟಿ. ಸತೀಶ, ಸುರೇಶ ವಗ್ಗನವರ, ರಾಜ್ಯ ವಕೀಲರ ಪರಿಷತ್ ಸದಸ್ಯ ಎ.ಎ. ಮಗದುಮ್ ಎಸ್.ಎಚ್. ಆಸೀಫ್ಅಲಿ, ಕೆ. ಕೋಟೇಶ್ವರ ರಾವ್, ಎಂ.ವಿ. ಹಿರೇಮಠ, ನ್ಯಾಯವಾದಿ ಬಸಯ್ಯ ಹಿರೇಮಠ, ಎಂ.ಪಿ. ಹಂಜಗಿ, ಪಿ.ಸಿ. ಶೀಗಿಹಳ್ಳಿ, ಆರ್.ವಿ. ಬೆಳಕೇರಿಮಠ, ಪಿ.ಆರ್. ಮಠದ, ವಿ.ಎಸ್. ಕಡಗಿ, ಪ್ರಕಾಶ ಬನ್ನಿಹಟ್ಟಿ, ಎಫ್.ಎಂ. ಮುಳಗುಂದ, ಬಿ.ಎಸ್. ಚೂರಿ, ನಿಂಗಪ್ಪ ಬಟ್ಟಲಕಟ್ಟಿ, ಶಂಕರ ಕುಸಗೂರ ಎಂ.ಜೆ. ಮುಲ್ಲಾ, ರಾಜು ಶಿಡೇನೂರ, ಎಂ.ಎಚ್. ಕಾಯಕದ, ಎಂ.ಎಫ್. ಮುಳಗುಂದ ಇತರರು ಇದ್ದರು.