

ಸವದತ್ತಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ವಕೀಲರ ಸಂಘದ ವತಿಯಿಂದ ಸಹಿ ಸಂಗ್ರಹಣೆ ಮೂಲಕ ಪಟ್ಟಣದಲ್ಲಿ ತಹಸೀಲ್ದಾರ್ ಎಂ.ಎನ್.ಹೆಗ್ಗಣ್ಣವರ ಅವರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.
ವಕೀಲರ ಸಂಘದ ಉಪಾಧ್ಯಕ್ಷ ಎಂ.ಎಸ್.ಹುಬ್ಬಳ್ಳಿ ಮಾತನಾಡಿ, ಪೊಲೀಸರ ಏಕಪಕ್ಷೀಯ ವರ್ತನೆಗಳಿಂದ ವಕೀಲರಿಗೆ ರಕ್ಷಣೆ ನೀಡಬೇಕು. ವಕೀಲರ ಸಂರಕ್ಷಣೆ ಕಾಯ್ದೆ-2024ಕ್ಕೆ ಸೂಕ್ತ ತಿದ್ದುಪಡಿಯಾಗಬೇಕು. ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯದ ಮಾರ್ಗಸೂಚಿ ಪಾಲಿಸಬೇಕು. ಕಾನೂನು ವಿದ್ಯಾರ್ಥಿಗಳನ್ನು ಗೊಂದಲಕ್ಕೆ ತಳ್ಳುವ ಮತ್ತು ಅವರ ಭವಿಷ್ಯ ಅಭದ್ರತೆಯಲ್ಲಿಡುವ ಅವೈಜ್ಞಾನಿಕ ಅಖಿಲ ಭಾರತ ಬಾರ್ ಪರೀಕ್ಷೆ ರದ್ದು ಪಡಿಸಬೇಕೆಂದು ಒತ್ತಾಯಿಸಿದರು.
ನ್ಯಾಯಾಲಯ ಸಂಕೀರ್ಣಗಳಲ್ಲಿ ವಕೀಲರ ಅಕಾಡೆಮಿ ಹಾಗೂ ರಾಜ್ಯದಲ್ಲಿ ಹೆಚ್ಚುವರಿ ನ್ಯಾಯಾಲಯ ಸ್ಥಾಪಿಸಬೇಕು. ಜತೆಗೆ ಈಗಿರುವ ನ್ಯಾಯಾಲಯಗಳಲ್ಲಿ ಮೂಲ ಸೌಲಭ್ಯ ಒದಗಿಸಬೇಕೆಂದು ಆಗ್ರಹಿಸಿದರು.
ಸಂಘದ ಕಾರ್ಯದರ್ಶಿ ಎಸ್.ಎಸ್.ಕಾಳಪ್ಪನವರ ಮಾತನಾಡಿ, ವಕೀಲರಿಗೆ ಟೋಲ್‌ಗಳಲ್ಲಿ ಶುಲ್ಕ ರಹಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಬೇಕು. ರಾಜ್ಯ ವಕೀಲರ ಪರಿಷತ್ ಕಚೇರಿಯನ್ನು ವಿಭಾಗೀಯ ಮಟ್ಟದಲ್ಲಿ ಸ್ಥಾಪಿಸಿ ವಕೀಲರ ಸಂಘ ಮತ್ತು ಪರಿಷತ್ ಚುನಾವಣೆಯಲ್ಲಿ ಮಹಿಳಾ ವಕೀಲರಿಗೆ ಶೇ.33ರಷ್ಟು ಮೀಸಲಾತಿ ನೀಡಬೇಕು. ಪರಿಶಿಷ್ಟ ಜಾತಿ/ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರಿಗೆ ಮೀಸಲಾತಿ ಅನುಸಾರ ಪ್ರಾತಿನಿಧ್ಯ ನೀಡಬೇಕು ಎಂದು ತಿಳಿಸಿದರು.
ವಕೀಲರಾದ ಆರ್.ವಿ.ಹುಂಬಿ, ಎಂ.ಎಸ್.ಕುರಿ, ಎ.ಎಂ.ಒಂಟಿ, ಎನ್.ಬಿ.ಭೋವಿ, ವಿ.ಆರ್.ಕಳ್ಳಿಮಠ, ಆರ್.ವಿ.ಪೂಜಾರ, ಎಸ್.ವೈ,ಶಿಬಾರಗಟ್ಟಿ ಇತರರಿದ್ದರು.