ತಂತ್ರಜ್ಞಾನದ ಕಡೆಯೂ ವಕೀಲರು ಗಮನ ಕೊಡಲಿ; ನ್ಯಾಯಾಧೀಶ ರವೀಂದ್ರ ಹೆಗ್ಡೆ ಸಲಹೆ

Vidyawardka Law College
Published on

ಮೈಸೂರು: ಈಗಾಗಲೇ ಕೃತಕ ಬುದ್ಧಿಮತ್ತೆ(ಎಐ) ನ್ಯಾಯಾಲಯಗಳಿಗೂ ಕಾಲಿಟ್ಟಿದ್ದು, ಆದ್ದರಿಂದ ಈ ತಂತ್ರಜ್ಞಾನದ ಕಲಿಕೆಯತ್ತಲೂ ಯುವ ವಕೀಲರು ಗಮನ ಕೊಡಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ರವೀಂದ್ರ ಹೆಗ್ಡೆ ಹೇಳಿದರು.


ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ವೃತ್ತಿ ಮಾರ್ಗದರ್ಶನ ಕಾರ್ಯಾಗಾರದಲ್ಲಿ ಮಾತನಾಡಿದರು.

ಈ ಹಿಂದೆ ಕಾನೂನು ವೃತ್ತಿಗೆ ಬರುವವರಲ್ಲಿ ವಾದ ಮಾಡುವ ಕೌಶಲದೊಂದಿಗೆ ಡ್ರಾಫ್ಟಿಂಗ್ ನೈಪುಣ್ಯವೂ ಇರಲೇಬೇಕಾಗಿತ್ತು. ಈಗ ಇವೆರಡರ ಜತೆಗೆ ಇಂಗ್ಲಿಷ್ ಭಾಷೆಯ ಮೇಲಿನ ಹಿಡಿತ, ಕಂಪ್ಯೂಟರ್ ಜ್ಞಾನ ಇರಲೇಬೇಕಾದುದು ಅನಿವಾರ್ಯ. ಈಗ ಎಐ ತಂತ್ರಜ್ಞಾನವನ್ನು ಕಲಿಯಬೇಕಿದೆ ಎಂದರು.


ಕಾನೂನುವೃತ್ತಿ ವಿದ್ಯಾರ್ಥಿ ಬದುಕಿನಷ್ಟು ಸುಲಭದ್ದಲ್ಲ. ನಿರಂತರ ಕಲಿಕೆ, ಎಂತಹ ಬಿಕ್ಕಟ್ಟಿನ ಸಂದರ್ಭಗಳಲ್ಲೂ ರಿಸ್ಕ್ ತೆಗೆದುಕೊಳ್ಳುವ ಮನೋಭಾವವಿದ್ದರೆ ಈ ವೃತ್ತಿಯಲ್ಲಿ ಯಶಸ್ಸು ಖಂಡಿತ ಎಂದರು.


ಭಾರತ ದಂಡ ಸಂಹಿತೆ-1860, ದಂಡ ಪ್ರಕ್ರಿಯಾ ಸಂಹಿತೆ-1973, ಭಾರತೀಯ ಸಾಕ್ಷ್ಯ ಅಧಿನಿಯಮ-1872 ಈ ಮೂರು ಕ್ರಿಮಿನಲ್ ಕಾನೂನುಗಳು ಬದಲಾಗಿವೆ. ಭಾರತದ ಕಾನೂನುಗಳು ನಿಂತ ನೀರಲ್ಲ ಎಂದರು.


ಕರ್ನಾಟಕದಲ್ಲಂತೂ ಕಾನೂನು ಪುಸ್ತಕಗಳು ಹೇರಳವಾಗಿ ಸಿಗುತ್ತವೆ. ಎಪಿಪಿ, ಕಿರಿಯ ಸಿವಿಲ್ ನ್ಯಾಯಾಧೀಶರ ಪರೀಕ್ಷೆಗಳನ್ನು ಈಗ ಕನ್ನಡ ಮಾಧ್ಯಮದಲ್ಲಿ ಕಾನೂನು ಓದಿದ ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಪಾಸ್ ಮಾಡಿ ನ್ಯಾಯಾಧೀಶರಾಗುತ್ತಿದ್ದಾರೆ. ಈ ಹಿಂದೆ ಶೇ.80- 90ರಷ್ಟು ಅಂಕ ಪಡೆದ ವಿದ್ಯಾರ್ಥಿಗಳು ಮೆಡಿಕಲ್, ಇಂಜಿನಿಯರಿಂಗ್ ಕೋರ್ಸ್‌ಗಳತ್ತ ಹೋಗುವುದು ವಾಡಿಕೆಯಾಗಿತ್ತು. ಈಗ ಅಧಿಕ ಅಂಕ ಗಳಿಸುವ ವಿದ್ಯಾರ್ಥಿಗಳು ಕಾನೂನು ಓದಿನತ್ತ ಬರುತ್ತಿರುವುದು ನಿಜಕ್ಕೂ ಆಶಾದಾಯಕ ಬೆಳವಣಿಗೆ ಎಂದು ಹೇಳಿದರು.


ಹಿರಿಯ ನುರಿತ ವಕೀಲರ ತಮ್ಮ ಅನುಭವದ ಆಧಾರದ ಮೇಲೆ ಕೇಳುವ ಪ್ರಶ್ನೆಗಳು ಯುವ ವಕೀಲರಿಗೆ ನೆರವಾಗಬಲ್ಲದು. ಸೈಬರ್ ಅಪರಾಧಗಳು, ಕಮರ್ಷಿಯಲ್ ಲಿಟಿಗೇಶನ್‌ಗಳು, ಬೌದ್ಧಿಕ ಸ್ವತ್ತಿನ ತಗಾದೆಗಳು, ವರಮಾನ ತೆರಿಗೆ ಪಾವತಿ ಕುರಿತ ಪ್ರಕರಣಗಳು, ಕಾರ್ಮಿಕರ ವಿವಾದಗಳು ಈಗ ಹೆಚ್ಚಿನ ಸಂಖ್ಯೆಯಲ್ಲಿ ನ್ಯಾಯಾಲಯ ಮತ್ತು ಟ್ರಿಬ್ಯೂನಲ್‌ಗಳಿಗೆ ಬರುತ್ತಿವೆ.

ನ್ಯಾಯವಾದಿಗಳು ಈಗ ಈ ಬಗೆಯ ವ್ಯಾಜ್ಯಗಳಲ್ಲಿ ಮಧ್ಯಸ್ಥಿಕೆಗಾರರಾಗಿ, ಸಂಧಾನಕಾರರಾಗಿ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವಕೀಲರಾಗಿ ಕಾರ್ಯನಿರ್ವಹಿಸಬಹುದು. ಈ ಮೂಲಕ ಪ್ರಕರಣಗಳನ್ನು ಇತ್ಯರ್ಥ ಮಾಡಬಹುದಾದ ಹೊಸ ಸಾಧ್ಯತೆಗಳನ್ನು ನ್ಯಾಯಾಲಯಗಳೇ ಸೃಷ್ಟಿಸಿವೆ ಎಂದು ತಿಳಿಸಿದರು.


ನಿರಂತರ ಓದು, ಕಲಿಕೆ, ವಿನಯ, ವಿವೇಕ ಯುವ ವಕೀಲರಲ್ಲಿ ಇರಬೇಕು. ಈ ವೃತ್ತಿಯ ಆರಂಭದ ದಿನಗಳಲ್ಲಿ ನಿಮಗೆ ನೀವು ನಿರೀಕ್ಷಿಸಿದಷ್ಟು ದುಡ್ಡು, ಯಶಸ್ಸು ಸಿಗದೇ ಇರಬಹುದು. ಆದರೆ, ನಿರಂತರ ಶ್ರಮ, ಕಲಿಯುವ ಮತ್ತು ಕಲಿತದ್ದನ್ನು ವೃತ್ತಿಯಲ್ಲಿ ಅಳವಡಿಸಿಕೊಳ್ಳುವ ವಿವೇಚನೆ ಮಾತ್ರ ನಿಮ್ಮನ್ನು ಗೆಲುವಿನ ದಡ ಮುಟ್ಟಿಸಬಲ್ಲದು ಎಂದು ವಿದ್ಯಾರ್ಥಿಗಳಿಗೆ ಹೇಳಿದರು.


ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪಗೌಡ, ಕಾರ್ಯದರ್ಶಿ ಪಿ.ವಿಶ್ವನಾಥ್, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕಾರ್ಯಕ್ರಮ ಸಂಯೋಜಕ ಆರ್.ಮೋಹನ್, ಪ್ರಾಂಶುಪಾಲೆ ಡಾ.ಪಿ.ದೀಪು, ಕಾರ್ಯಕ್ರಮದ ಸಂಯೋಜಕಿ ಡಾ.ಶ್ರೀದೇವಿ ಕೃಷ್ಣ ಇದ್ದರು. ಕಾರ್ಯಾಗಾರದಲ್ಲಿ ಬೆಂಗಳೂರು ವಲಯ ವ್ಯಾಪ್ತಿಯ 50 ಕಾನೂನು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net