ಗೌರಿ-ಗಣೇಶ ಆಚರಣೆ ವೇಳೆ ಕಾನೂನು ಪಾಲನೆಯಾಗಲಿ

21sunti02
Published on

ಸುಂಟಿಕೊಪ್ಪ: ಗೌರಿ-ಗಣೇಶ ಹಬ್ಬ ಆಚರಣೆ ಸಂದರ್ಭ ಆಯೋಜಕರು ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರ ವಹಿಸುವುದರ ಜತೆಗೆ ಕಾನೂನನ್ನು ಪಾಲಿಸಬೇಕು ಎಂದು ಜಿಲ್ಲಾ ಪೊಲೀಸ್ ಹೆಚ್ಚುವರಿ ವರಿಷ್ಠಾಧಿಕಾರಿ ಸುಂದರರಾಜ್ ಹೇಳಿದರು.


ಇಲ್ಲಿನ ಪೊಲೀಸ್ ಠಾಣೆ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ ಗೌರಿ-ಗಣೇಶ ಆಚರಣಾ ಸಮಿತಿಗಳ ಪೂರ್ವಭಾಗಿ ಸಭೆಯಲ್ಲಿ ಮಾತನಾಡಿದ ಅವರು, ಹಬ್ಬದ ಸಂಸ್ಕೃತಿಯನ್ನು ಎತ್ತಿ ಹಿಡಿಯುವುದು ಮುಖ್ಯ. ಅಲ್ಲದೆ ಅನಾಹುತ ಸಂಭವಿಸಿದರೆ ಆಯೋಜಕರೇ ನೇರ ಹೊಣೆಗಾರರು ಎಂದರು.


ಸರ್ಕಾರದ ಮಾರ್ಗಸೂಚಿಗಳನ್ನು ಗ್ರಾಮಗಳಲ್ಲಿ ಅನುಸರಿಸಬೇಕು. ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಆಯೋಜಕರು ಪೊಲೀಸ್‌ಠಾಣೆ ಸೇರಿದಂತೆ ವಿವಿಧ ಇಲಾಖೆಗಳಿಂದ ಅನುಮತಿ ಪಡೆಯುವುದು ಕಡ್ಡಾಯ. ಮುಂಜಾಗ್ರತಾ ಕ್ರಮವಾಗಿ ಮೂರ್ತಿ ಪ್ರತಿಷ್ಠಾಪಿಸುವ ಸ್ಥಳದಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಬೇಕು. ಇದರಿಂದ ಅಹಿತಕರ ಘಟನೆಗಳನ್ನು ತಡೆಯಬಹುದಾಗಿದೆ ಎಂದರು.


ವಿದ್ಯುತ್ ಸಂಪರ್ಕವನ್ನು ಪಡೆಯುವಾಗ ಸೂಕ್ಷ್ಮತೆಯನ್ನು ಗಮನದಲ್ಲಿ ಇರಿಸಿಕೊಳ್ಳಬೇಕು. ಮೂರ್ತಿಗಳನ್ನು ಪ್ರತಿಷ್ಠಾಪಿಸಿದ ಸ್ಥಳದಲ್ಲಿ ಸಮಿತಿಯ ಇಬ್ಬರು ಪದಾಧಿಕಾರಿಗಳು ಕಾವಲು ಇರಬೇಕು. ಸ್ಥಳದ ಮಾಹಿತಿಯನ್ನು ಪಡೆದಿರಬೇಕು. ವಿಸರ್ಜನೆ ವೇಳೆ ನುರಿತ ಈಜು ಬಲ್ಲವರು ಜಾಕೆಟ್ ಅನ್ನು ಕಡ್ಡಾಯವಾಗಿ ತೊಟ್ಟಿರಬೇಕು. ಮೂರ್ತಿಗಳ ವಿಸರ್ಜಿನೆ ವೇಳೆ ಅಲಂಕೃತ ಮಂಟಪ ಮೆರವಣಿಗೆ ತೆರಳುವ ಮಾರ್ಗಗಳ ಮಾಹಿತಿಯನ್ನು ಪೊಲೀಸ್ ಠಾಣೆಗೆ ನೀಡಬೇಕು ಎಂದು ಸೂಚಿಸಿದರು.


ಕುಶಾನಗರ ವೃತ್ತನಿರೀಕ್ಷಕರಾದ ರಾಜೇಶ್ ಕೋಟ್ಯಾನ್, ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಚಂದ್ರಶೇಖರ್ ಮಾತನಾಡಿದರು. ಅಪರಾಧ ವಿಭಾಗದ ಎಸ್.ಐ.ಭಾರತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net