

ಕೊಟ್ಟೂರು: ಚಾನುಕೋಟಿ ಮಠದ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅವರಿಗೆ ವಿದ್ವತ್, ಪಾಂಡಿತ್ಯ, ಪ್ರೌಢಿಮೆ ಇದ್ದರೂ ಉನ್ನತ ಸ್ಥಾನಕ್ಕೇರುವ, ಜಗದ್ಗುರುಗಳಾಗುವ ಅವಕಾಶ, ಸೌಭಾಗ್ಯ ದೊರೆಯಲಿಲ್ಲವೆಂದು ಪಪಂ ಸದಸ್ಯ ಕೆ.ಎಸ್. ಈಶ್ವರಗೌಡ್ರು ಹೇಳಿದರು.
ಪಟ್ಟಣದ ಚಾನುಕೋಟಿ ಮಠದಲ್ಲಿ ಆಯೋಜಿಸಿದ್ದ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅವರ ಷಷ್ಠಿ ಸಂಭ್ರಮ ಹಾಗೂ ಪಂಚಾಚಾರ್ಯರ ಯುಗಮಾನೋತ್ಸವ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಚಾನುಕೋಟಿ ಮಠದ ಡಾ.ಸಿದ್ದಲಿಂಗ ಶಿವಾಚಾರ್ಯರು ಪ್ರತಿ ಹೋರಾಟದಲ್ಲಿ ಮುಂಚೂಣಿಯಲ್ಲಿರುತ್ತಾರೆ ಎಂದರು.
ಸ್ವಾಮೀಜಿ ನೇತೃತ್ವದಲ್ಲಿ ನಡೆದ ಫಲವೇ ಹೊಸಪೇಟೆ-ಕೊಟ್ಟೂರು-ಹರಿಹರ ರೈಲು ಮಾರ್ಗ ಆಯಿತು, ಕೊಟ್ಟೂರು ತಾಲೂಕು ಕೇಂದ್ರವಾಯಿತು. ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿ ಹೋರಾಟಕ್ಕೂ ಡಾ.ಸಿದ್ದಲಿಂಗ ಶಿವಾಚಾರ್ಯರು ಮುಂದಾಳತ್ವ ವಹಿಸಬೇಕು. ರೈತರು ಬೆಂಬಲಿಸಿ, ತನು, ಮನ, ಧನದ ಸಹಕಾರ ನೀಡುವರು. ಮಠಾಧೀಶರ ಧರ್ಮ ಪರಿಷತ್ ಕೂಡ ಬೆಂಬಲಿಸಬೇಕು ಎಂದು ಈಶ್ವರಗೌಡ್ರು ತಿಳಿಸಿದರು.
ಕಾಶಿ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ, ಕೂಡ್ಲಿಗಿ ಹಿರೇಮಠದ ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮೀಜಿ, ಬೆಣ್ಣೆಹಳ್ಳಿಯ ಪಂಚಾಕ್ಷರಿ ಶಿವಾಚಾರ್ಯ ಸ್ವಾಮೀಜಿ, ನಂದಿಪುರದ ಮಹೇಶ್ವರ ಸ್ವಾಮೀಜಿ, ಕೆ.ಪಿ.ಸಿ.ಸಿ. ಸದಸ್ಯ ಗೂಳಿ ಮಲ್ಲಿಕಾರ್ಜುನ, ಪ್ರಮುಖರಾದ ಮಾಮನಿ ವೀರಭದ್ರಪ್ಪ, ನಿರ್ಮಲ ಶಿವನಗುತ್ತಿ, ದೇವರಮನಿ ಕರಿಯಪ್ಪ, ಬಿ.ಎಂ.ಸಿಂಧು ಇತರರಿದ್ದರು.