

ಹುಬ್ಬಳ್ಳಿ : ಪಹಲ್ಗಾಮ್ನಲ್ಲಿ ಭಯೋತ್ಪಾದಕರು ನಡೆಸಿದ ದಾಳಿಗೆ ಪ್ರಧಾನಿ ನರೇಂದ್ರ ಮೋದಿ ಅವರ ರಾಜೀನಾಮೆ ಕೇಳುತ್ತಿರುವ ಸಚಿವ ಸಂತೋಷ ಲಾಡ್ ಅವರು ಕಾಶ್ಮೀರದ ಎಲ್ಲ ಸಮಸ್ಯೆಗಳಿಗೆ ಮೂಲ ಕಾರಣವೇ ಕಾಂಗ್ರೆಸ್ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರ ಮುತ್ತಾತ ಅಂದಿನ ಪ್ರಧಾನಿ ಜವಾಹರಲಾಲ್ ಅವರೇ ಜಮ್ಮು ಮತ್ತು ಕಾಶ್ಮೀರದಲ್ಲಿ 370 ಕಾಯ್ದೆ ಜಾರಿಗೊಳಿಸಿದ್ದರು ಎಂಬುದನ್ನು ಸಂತೋಷ ಲಾಡ್ ಮರೆಯಬಾರದು ಎಂದರು.
ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ಕಾಶ್ಮೀರದಲ್ಲಿ ಅಭಿವೃದ್ಧಿ ಕೆಲಸಗಳು ಆರಂಭಗೊಂಡವು. ಪ್ರವಾಸಿಗರ ಸಂಖ್ಯೆ ಹೆಚ್ಚಾಯಿತು. ಇದೆಲ್ಲ ಸಚಿವ ಸಂತೋಷ ಲಾಡ್ ಅವರಿಗೆ ಕಾಣುತ್ತಿಲ್ಲವೇ ? ಎಂದು ಪ್ರಶ್ನಿಸಿದ ಶಾಸಕ ಟೆಂಗಿನಕಾಯಿ, ಇಸ್ಲಾಮಿಕ್ ಟೆರರಿಸಮ್ ಬಗ್ಗೆ ಲಾಡ್ ಮಾತನಾಡಲಿ ಎಂದು ಸವಾಲು ಹಾಕಿದರು.
ವಿದೇಶ ಪ್ರವಾಸದಲ್ಲಿದ್ದ ನರೇಂದ್ರ ಮೋದಿ ಭಯೋತ್ಪಾದನಾ ದಾಳಿ ನಡೆದ ತಕ್ಷಣ ಭಾರತಕ್ಕೆ ವಾಪಸ್ಸಾಗಿ, ತುರ್ತು ಸಭೆ ಕರೆದು ಪಾಕಿಸ್ತಾನದ ವಿರುದ್ಧ ಗಟ್ಟಿ ನಿರ್ಧಾರ ಪ್ರಕಟಿಸಿದ್ದಾರೆ. ಇದಕ್ಕೆ ವಿರೋಧ ಪಕ್ಷದ ನಾಯಕರು ಸಹ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ, ರಾಜ್ಯದ ಕಾಂಗ್ರೆಸ್ ಮುಖಂಡರು ಅಸಂಬದ್ಧ ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ಕಾಂಗ್ರೆಸ್ ವಕ್ತಾರ ಲಕ್ಷ ಣ ಅವರು ಸಹ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಅಸಂಬದ್ಧ ಹೇಳಿಕೆ ನೀಡಿ, ಸೈನಿಕರ ಮನೋಧೈರ್ಯ ಕುಗ್ಗುವಂತೆ ಮಾತನಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಚಿವ ಲಾಡ್ ಅವರು ಕೇಂದ್ರ ಸರ್ಕಾರ ಭಯೋತ್ಪಾದನೆ ನಿಯಂತ್ರಿಸಿರುವ ಕುರಿತು ಅಂಕಿಅಂಶ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ್ದಾರೆ. 2004 ರಿಂದ 2014ರವರೆಗಿನ ಕಾಂಗ್ರೆಸ್ ಆಡಳಿತದಲ್ಲಿ ದೆಹಲಿ, ಮುಂಬೈ, ವಾರಣಾಸಿ, ಜೈಪುರ, ಅಹಮದಾಬಾದ್, ಪುಣೆೆ, ಹೈದ್ರಾಬಾದ್ ಸೇರಿದಂತೆ ವಿವಿಧೆಡೆ ಬಾಂಬ್ ಸೊ್ಪೕಟ್ ನಡೆದು ನೂರಾರು ಮಂದಿ ಮೃತಪಟ್ಟು, ಸಾವಿರಾರು ಮಂದಿ ಗಾಯಗೊಂಡಿದ್ದರು. ಇದಕ್ಕೆ ಹೋಲಿಸಿದರೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಅವಧಿಯಲ್ಲಿ ಶೇ 70ರಷ್ಟು ಬಾಂಬ್ ದಾಳಿ, ಕಲ್ಲು ಎಸೆತ, ನಾಗರಿಕ ಹತ್ಯೆ ಪ್ರಕರಣಗಳನ್ನು ನಿಯಂತ್ರಿಸಲಾಗಿದೆ ಎಂದು ವಿವರಿಸಿದರು.
ಪಹಲ್ಗಾಮ್ ದಾಳಿ ಸಂಬಂಧಿಸಿ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಗಳಿಗೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸಂಪೂರ್ಣ ಬೆಂಬಲವಿರುವುದಾಗಿ ಹೇಳಿದ್ದಾರೆ. ಆದರೆ, ಇದು ಸಚಿವ ಸಂತೋಷ ಲಾಡ್ ಅವರಿಗೆ ಸಮಾಧಾನ ನೀಡಿದಂತಿಲ್ಲ. ಸಂತೋಷ ಲಾಡ್ ಅವರು ರಾಷ್ಟ್ರಮಟ್ಟದಲ್ಲಿ ತಮ್ಮ ಜ್ಞಾನ ಪ್ರದರ್ಶಿಸಲು ವಿರೋಧ ಪಕ್ಷದ ನಾಯಕರಾಗಲಿ ಎಂದು ಟೀಕಿಸಿದರು.
ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ರಾಜು ಕಾಳೆ, ರವಿ ನಾಯ್ಕ ಸುದ್ದಿಗೋಷ್ಠಿಯಲ್ಲಿ ಇದ್ದರು.