

ಮುಂಡರಗಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮಹತ್ವದ ಯೋಜನೆಯಾದ ‘ಕೂಸಿನಮನೆ’ ಗ್ರಾಪಂ ಮಟ್ಟದಲ್ಲಿ ಸುಗಮವಾಗಿ ಹಾಗೂ ಸಮರ್ಪಕವಾಗಿ ಅನುಷ್ಠಾನಗೊಳ್ಳಲು ಮೇಲುಸ್ತುವಾರಿ ಸಮಿತಿ ಪದಾಧಿಕಾರಿಗಳ ಪಾತ್ರ ಬಹುಮುಖ್ಯವಾಗಿದೆ ಎಂದು ತಾಪಂ ಇಒ ವಿಶ್ವನಾಥ ಹೊಸಮನಿ ಹೇಳಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಸೋಮವಾರ ಅಬ್ದುಲ್ ನಜೀರಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಜಿಪಂ ಗದಗ, ತಾಪಂ ಸಹಯೋಗದಲ್ಲಿ ಏರ್ಪಾಟಾಗಿದ್ದ ‘ಗ್ರಾಪಂ ಹಂತದ ಕೂಸಿನಮನೆ’ ಮೇಲ್ವಿಚಾರಣಾ ಸಮಿತಿ ಸದಸ್ಯರ ತರಬೇತಿಗೆ ಚಾಲನೆ ನೀಡಿ ಮಾತನಾಡಿದರು.
ಗ್ರಾಪಂ ಅಧ್ಯಕ್ಷರು, ಶಿಶುಪಾಲನಾ ಕೇಂದ್ರ ವ್ಯಾಪ್ತಿಯ ಸರ್ಕಾರಿ ಶಾಲಾ ಮುಖ್ಯಶಿಕ್ಷಕರು, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಮತ್ತು ಮಹಿಳಾ ಒಕ್ಕೂಟದ ಸದಸ್ಯರು ತರಬೇತಿ ಪಡೆದು ಕೂಸಿನಮನೆಗಳು ರಾಜ್ಯದಲ್ಲಿಯೇ ಮಾದರಿಯಾಗಿ ಕಾರ್ಯನಿರ್ವಹಿಸುವಂತೆ ಶ್ರಮಿಸಬೇಕು ಎಂದರು.
ನರೇಗಾ ಯೋಜನೆ ಗ್ರಾಮೀಣ ಜನರಿಗೆ ಉದ್ಯೋಗ ಸೃಜಿಸಲು ಇರುವ ಯೋಜನೆ. ಗ್ರಾಮೀಣರ ಜೀವನಮಟ್ಟ ಸುಧಾರಿಸಲು ಸಣ್ಣ ಮಕ್ಕಳಿದ್ದಾಗ ಕೂಲಿಯಲ್ಲಿ ಭಾಗವಹಿಸಲು ಕೂಲಿಕಾರರಿಗೆ ಅಡಚಣೆಗಳು ಉಂಟಾಗುತ್ತವೆ. ಅಂತಹ ಕೂಲಿಕಾರರ ಮಕ್ಕಳನ್ನು ಕೂಸಿನಮನೆಯ ಮೂಲಕ ಲಾಲನೆ, ಪಾಲನೆ ಮಾಡಿ ಏಕಕಾಲಕ್ಕೆ ಉದ್ಯೋಗ ಹಾಗೂ ಮಕ್ಕಳ ಪಾಲನೆ ಮಾಡುವ ಮಹತ್ವದ ಉದ್ದೇಶ ಕೂಸಿನಮನೆ ಯೋಜನೆಯ ಹಿಂದಿದೆ. ಮೇಲುಸ್ತುವಾರಿ ಸಮಿತಿಯ ಪದಾಧಿಕಾರಿಗಳ ಜವಾಬ್ದಾರಿ ಮತ್ತು ಮೇಲ್ವಿಚಾರಣಾ ಕ್ರಮಗಳ ಕುರಿತು ಮಾಹಿತಿ, ತರಬೇತಿ ಪಡೆದು ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಶ್ರಮಿಸಬೇಕು ಎಂದರು.