ವೈಜ್ಞಾನಿಕ ಸಂಶೋಧನೆ ವೇಗಕ್ಕೆ ಜ್ಞಾನ ಹೆಚ್ಚಲಿ: ವಿಶ್ರಾಂತ ವಿಜ್ಞಾನಿ ಡಾ.ಜಿ.ವೆಂಕಟೇಶ್ವರನ್ ಸಲಹೆ

14
Published on

ಮೈಸೂರು: ವೈಜ್ಞಾನಿಕ ಸಂಶೋಧನೆಗಳು ವೇಗ ಗತಿಯಲ್ಲಿ ಸಾಗುತ್ತಿರುವ ಈ ದಿನಮಾನದಲ್ಲಿ ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಅದಕ್ಕೆ ತಕ್ಕಂತೆ ವೃದ್ಧಿಸಿಕೊಳ್ಳಬೇಕು ಎಂದು ಸಿಎಫ್‌ಟಿಆರ್‌ಐ ವಿಶ್ರಾಂತ ವಿಜ್ಞಾನಿ ಡಾ.ಜಿ.ವೆಂಕಟೇಶ್ವರನ್ ಸಲಹೆ ನೀಡಿದರು.
ನಗರದ ಮಹಾರಾಣಿ ಮಹಿಳಾ ವಿಜ್ಞಾನ ಸ್ವಾಯತ್ತೆ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ತಂತ್ರಜ್ಞಾನವನ್ನು ಬಳಸಿಕೊಂಡು, ಜ್ಞಾನವನ್ನು ಬೆಳೆಸಿಕೊಳ್ಳಿ. ತಂತ್ರಜ್ಞಾನ ಆಧಾರಿತ ಜ್ಞಾನದ ಬಳಕೆಯೇ ಇಂದು ಮುಖ್ಯವಾಗಿದೆ. ಇಲ್ಲವಾದರೆ ಉದ್ಯೋಗಾವಕಾಶ ಲಭಿಸದೆ ನೀವೇ ಅಪ್ರಸ್ತುತ ಆಗುವ ಆಪಾಯವಿದೆ ಎಂದು ಎಚ್ಚರಿಸಿದರು.
ನಮ್ಮ ದೇಶದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಸಂಶೋಧನಾ ಕೇಂದ್ರಗಳಿವೆ. ಅಲ್ಲಿ ಸಂಶೋಧನೆ ಮಾಡಲು ಹಲವಾರು ಅವಕಾಶಗಳಿವೆ. ಅವುಗಳಿಗೆ ಪ್ರವೇಶ ಪಡೆದು ಸಂಶೋಧನೆ ನಡೆಸಿ ದೇಶಕ್ಕೆ ಕೊಡುಗೆ ನೀಡಬೇಕು. ಅಂತರ್ಜಾಲವನ್ನು ಶೈಕ್ಷಣಿಕ ಮಾಹಿತಿ ಪಡೆಯಲು ಮತ್ತು ಅದರಲ್ಲಿ ಪ್ರಗತಿ ಕಾಣಲು ಬಳಸಿಕೊಂಡು, ಒಳ್ಳೆಯ ಉದ್ಯೋಗ ಪಡೆದು ಉತ್ತಮ ಪ್ರಜೆಗಳಾಗಿ ಎಂದರು.
ಆಹಾರ ಪದಾರ್ಥಗಳನ್ನು ಮತ್ತು ಧಾನ್ಯಗಳನ್ನು ಆರೋಗ್ಯ ವೃದ್ಧಿಸಿಕೊಳ್ಳುವ ಸಲುವಾಗಿ ಬಳಸಿ, ಬದಲಿಗೆ ಆರೋಗ್ಯವನ್ನು ಹದಗೆಡಿಸುವ ಆಹಾರ ಪದಾರ್ಥಗಳನ್ನು ಬಳಸಬೇಡಿ ಎಂದು ಡಿಎಫ್‌ಆರ್‌ಎಲ್ ಮತ್ತು ಸಿಎಫ್‌ಟಿಆರ್‌ಐನಲ್ಲಿ ನಡೆದಿರುವ ಹಲವು ಆವಿಷ್ಕಾರಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ.ಅಬ್ದುಲ್ ರಹಿಮಾನ್ ಮಾತನಾಡಿ, ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುವುದೆಂದರೆ, ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವುದು ಎಂದರ್ಥ. ಹಾಗಾಗಿ ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ಸಮಾಜವನ್ನು, ತಮ್ಮ ಸುತ್ತಮುತ್ತಲಿನ ಪರಸರವನ್ನು ಬದಲಾಯಿಸಲು ಪ್ರಯತ್ನಿಸಿ ಎಂದು ಬುದ್ಧಿಮಾತು ಹೇಳಿದರು.
ಆಂತರಿಕ ಗುಣಮಟ್ಟ ಕೋಶದ ಸಂಚಾಲಕ ವಿ.ನಂದಕುಮಾರ್, ವಿಜ್ಞಾನ ಸಮಿತಿ ಸಂಚಾಲಕ ಸರ್ದಾರ್ ಹುಸೇನ್, ಅಧ್ಯಾಪಕ ಕಾರ್ಯದರ್ಶಿ ಡಾ. ಡಿ.ಕೆ.ರವಿಶಂಕರ್, ಸಮಿತಿ ಸದಸ್ಯರಾದ ಡಾ.ಸಿದ್ದೇಗೌಡ, ಎಸ್.ವಿ.ಪ್ರಭಾಕರ್, ಡಾ. ಎಂ.ಎಸ್. ಕುಮಾರ್, ಪೃಥ್ವಿರಾಜ್, ಗೋವಿಂದರಾಜು, ಮಾನಸ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net