

ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ರಾಜ್ಯಕ್ಕೆ ಅದರದೇ ಆದ ಇತಿಹಾಸವಿದೆ. ಕನ್ನಡ ಭಾಷೆ ಮಾತನಾಡುವ ಎಲ್ಲ ಪ್ರದೇಶಗಳನ್ನು ವಿಲೀನಗೊಳಿಸಿ ಕರ್ನಾಟಕ ರಾಜ್ಯ ಘೋಷಿಸಿದ ದಿನವನ್ನು ಕನ್ನಡ ರಾಜ್ಯೋತ್ಸವ ಎಂದು ಆಚರಿಸುತ್ತೇವೆ. ನಮ್ಮ ರಾಜ್ಯ ಹೊರತುಪಡಿಸಿ ವಿಶ್ವದಾದ್ಯಂತ ಕನ್ನಡಿಗರು ಆಚರಿಸುತ್ತಾರೆ. ಇದು ನಮ್ಮ ಕನ್ನಡ ಭಾಷೆ, ನೆಲ, ಜಲಕ್ಕೆ ಇರುವ ಅಭಿಮಾನ ಹಾಗೂ ಶ್ರೇಷ್ಠತೆ ಎಂದು ಜೆಎಸ್ಎಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.
ನಗರದ ಜೆಎಸ್ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ, ಜೆಎಸ್ಎಸ್ ಐಟಿಐ ಕಾಲೇಜು, ಜೆಎಸ್ಎಸ್ ಎಂಸಿಎ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಿದ್ದ ರಾಜ್ಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ನಮ್ಮ ಕನ್ನಡ ಭಾಷೆ ಪ್ರತಿಯೊಬ್ಬ ಕನ್ನಡಿಗನ ಉಸಿರಾಗಬೇಕು, ಬೆಳೆಯಬೇಕು. 1947ರಲ್ಲಿ ಕರ್ನಾಟಕ 20 ರಾಜ್ಯಗಳಾಗಿ ಹರಿದು ಹಂಚಿ ಹೋಗಿತ್ತು. ಭಾಷಾವಾರು ರಾಜ್ಯಗಳಿಗಾಗಿ ಕರ್ನಾಟಕದಲ್ಲಿ ಅಂದಾನೆಪ್ಪ ದೊಡ್ಡಮೇಟಿ 1953ರಲ್ಲಿ ಉಪವಾಸ ಸತ್ಯಾಗ್ರಹ ಕೈಗೊಂಡರು. ಅಂತಿಮವಾಗಿ ಕಮಿಟಿ ರಚನೆಯಾಗಿ, ಭಾಷಾವಾರು ಪ್ರಾಂತ್ಯಗಳಿಗೆ ನಿರ್ದೇಶನ ನೀಡಿದರು. ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಸಾಹಿತಿಗಳು ಸೇರಿ ಅನೇಕ ಜನರು, ಸಂಘ-ಸಂಸ್ಥೆಗಳು ಪಾಲ್ಗೊಂಡಿದ್ದವು. ಕರ್ನಾಟಕ ಏಕೀಕರಣಕ್ಕೆ 10ಕ್ಕಿಂತ ಹೆಚ್ಚು ಅಧಿವೇಶನಗಳು ನಡೆದವು. ಅದರಲ್ಲಿ 1924ರಲ್ಲಿ ಜರುಗಿದ ಬೆಳಗಾವಿ ಅಧಿವೇಶನದಲ್ಲಿ ಗಾಂಧೀಜಿಯವರು ಭಾಗವಹಿಸಿದ್ದು, ಕರ್ನಾಟಕ ರಾಜ್ಯದ ಉದಯಕ್ಕೆ ಇನ್ನಷ್ಟು ಬಲ ತುಂಬಿತು ಎಂದರು.
ಡಾ. ಆರ್.ವಿ. ಚಿಟಗುಪ್ಪಿ ಮಾತನಾಡಿದರು. ಸಂಸ್ಥೆಯ ವಿವಿಧ ವಿಭಾಗಗಳ ಮುಖ್ಯಸ್ಥರು, ಶಿಕ್ಷಕರು, ವಿದ್ಯಾರ್ಥಿಗಳು, ಇತರರು ಇದ್ದರು. ಡಾ. ಸೂರಜ್ ಜೈನ್ ನಿರೂಪಿಸಿದರು. ಮಹಾವೀರ ಉಪಾಧ್ಯೆ ವಂದಿಸಿದರು.