

ಮೈಸೂರು: ಪ್ರಸ್ತುತ ಕನ್ನಡ ಮಾಧ್ಯಮದಲ್ಲಿ ಓದಿದರೆ ಉದ್ಯೋಗ ದೊರೆಯಲ್ಲ ಎಂಬ ಭಾವನೆ ನಿವಾರಣೆಯಾಗಬೇಕು. ಕನ್ನಡ ಅನ್ನದ ಭಾಷೆಯಾಗಬೇಕು ಎಂದು ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರಿನ ರಾಸಾ ಕನ್ನಡ ಮತ್ತು ಕಲಾ ಸಂಸ್ಕೃತಿ ಚಾರಿಟಬಲ್ ಟ್ರಸ್ಟ್ ಮತ್ತು ರಾಸಾ ಪಬ್ಲಿಕೇಷನ್ಸ್ ಸಹಯೋಗದಲ್ಲಿ ವಿಜಯನಗರದ ಕನ್ನಡ ಸಾಹಿತ್ಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ಕನ್ನಡ ನುಡಿ ಸಂಭ್ರಮ, ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಡಾ.ಸರೋಜಿನಿ ಮಹಿಷಿ ವರದಿ ಆಧರಿಸಿ ಸ್ಥಳೀಯರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು. ರಾಜ್ಯ ಸರ್ಕಾರ ಈ ಕುರಿತು ಕ್ರಮ ತೆಗೆದುಕೊಳ್ಳಬೇಕು ಎಂದರು.
ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಪ್ರಾಚೀನ ಭಾಷೆಯಾಗಿರುವುದರಿಂದಲೇ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದೆ. ಅತಿ ಹೆಚ್ಚು ಜ್ಞಾನಪೀಠ ಪುರಸ್ಕಾರಗಳು ಕನ್ನಡಕ್ಕೆ ಬಂದಿವೆ. ಇಷ್ಟೆಲ್ಲ ಇದ್ದರೂ ಸಹ ನಾವು ನವೆಂಬರ್‌ನಲ್ಲಿ ಮಾತ್ರ ಕನ್ನಡದ ಜಾಗೃತರಾಗಿ ಬೇರೆ ಸಂದರ್ಭದಲ್ಲಿ ಮರೆಯುತ್ತಿದ್ದೇವೆ. ಇದರ ಬದಲು ವರ್ಷವಿಡೀ ಕನ್ನಡ ಕಲೆ, ಸಾಹಿತ್ಯ, ಸಂಸ್ಕೃತಿ, ಇತಿಹಾಸ, ಪರಂಪರೆ ಬೆಳೆಸುವ ಕಾರ್ಯಕ್ರಮಗಳನ್ನು ಸಂಘಟಿಸಬೇಕು ಎಂದರು.
ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮೈವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕಿ, ಕವಯತ್ರಿ ಡಾ.ಎನ್.ಕೆ.ಲೋಲಾಕ್ಷಿ, ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ರಾಸಾ ಕನ್ನಡ ಮತ್ತು ಕಲಾ ಸಂಸ್ಕೃತಿ ಚಾರಿಟಬಲ್ ಟ್ರಸ್ಟಿನ ಸಂಸ್ಥಾಪಕ ಅಧ್ಯಕ್ಷ ರಾಸಾ ಆರ್. ಈಶ್ವರ್, ಟ್ರಸ್ಟಿ ಹೇಮಾ, ಜಿಲ್ಲಾ ಕಸಾಪ ಉಪಾಧ್ಯಕ್ಷ ಟಿ. ತ್ಯಾಗರಾಜು, ಹರೇ ಶ್ರೀನಿವಾಸ ಸಮಿತಿಯ ಅಧ್ಯಕ್ಷ ಗುಂಡು ವೆಂಕಟೇಶಕುಮಾರ್, ಮಾನವಹಕ್ಕು ಹೋರಾಟಗಾರ ಕಸ್ತೂರಿ ಚಂದ್ರು ಪಾಲ್ಗೊಂಡಿದ್ದರು.