

ಬೆಂಗಳೂರು: ರಾಜ್ಯದ ಅಧೀನ ನ್ಯಾಯಾಲಯಗಳಲ್ಲಿ ಕನ್ನಡದ ಬಳಕೆ ಎಷ್ಟು ಮುಖ್ಯವೋ, ಹೈಕೋರ್ಟ್ನಲ್ಲೂ ಕನ್ನಡದ ಸಮಗ್ರ ಅನುಷ್ಠಾನ ಅಷ್ಟೇ ಮುಖ್ಯ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಪ್ರತಿಪಾದಿಸಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಶನಿವಾರ ಹಮ್ಮಿಕೊಂಡಿದ್ದ ನ್ಯಾಯಾಂಗದಲ್ಲಿ ಕನ್ನಡ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ನ್ಯಾಯಾಧೀಶರು ಸಹ ಕನ್ನಡ ಕಲಿಯಬೇಕು. ಆಗ ಕನ್ನಡದಲ್ಲಿ ಆದೇಶ ಮತ್ತು ತೀರ್ಪು ನೀಡಲು ಸಾಧ್ಯ. ಇದರಿಂದ ಸಾಮಾನ್ಯ ಕಕ್ಷಿದಾರರಿಗೂ ತಮ್ಮ ಪ್ರಕರಣಗಳ ತೀರ್ಪು ಸುಲಭವಾಗಿ ಅರ್ಥವಾಗುತ್ತದೆ ಎಂದರು.
ಕನ್ನಡದ ಅಭ್ಯುದಯ, ಆಡಳಿತ ಸುಧಾರಣೆ, ಸ್ಥಳೀಯರಿಗೆ ಉದ್ಯೋಗಾವಕಾಶ, ಗಡಿನಾಡ ಕನ್ನಡಿಗರ ಜೀವನ ಸುಧಾರಣೆ ಸೇರಿ ಅನೇಕ ಕನ್ನಡಪರ ಕಾರ್ಯಗಳಿಗೆ ಸರ್ಕಾರ ಬದ್ಧವಾಗಿದೆ. ನ್ಯಾಯಾಂಗದಲ್ಲಿ, ವಿಶೇಷವಾಗಿ ಹೈಕೋರ್ಟ್ ನಲ್ಲಿ ಕನ್ನಡ ಶೀಘ್ರಲಿಪಿಕಾರರ ಕೊರತೆ ನೀಗಿಸಲು ನ್ಯಾಯಾಂಗ ಅಕಾಡೆಮಿ ಸಹಯೋಗದಲ್ಲಿ ಸರ್ಕಾರದ ವತಿಯಿಂದ ಶೀಘ್ರಲಿಪಿಕಾರರ ತರಬೇತಿ ಸಂಸ್ಥೆ ಆರಂಭಿಸುವ ಸಲಹೆ ಕಾರ್ಯರೂಪಕ್ಕೆ ತರಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ನ್ಯಾಯಾಂಗದಲ್ಲಿ ಕನ್ನಡ ಬಳಕೆಯ ಸಾಧಕ-ಬಾಧಕ ಕುರಿತು ಮಾತನಾಡಿದ ನ್ಯಾ. ಕೆ.ಎನ್. ಫಣೀಂದ್ರ, ಕನ್ನಡದಲ್ಲಿ ತೀರ್ಪು ನೀಡುವುದರಿಂದ ಅದನ್ನು ಬೇಗನೆ ಅರ್ಥ ಮಾಡಿಕೊಂಡು ಮೇಲ್ಮನವಿ ಸಲ್ಲಿಸುವ ಬಗ್ಗೆ ತ್ವರಿತ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದರು. ಆದರೆ, ಹೈಕೋರ್ಟ್ನಲ್ಲಿ ಇಂಗ್ಲಿಷ್ ಅಧಿಕೃತ ಭಾಷೆಯಾಗಿದೆ.
ಜತೆಗೆ ಹೊರರಾಜ್ಯಗಳ ನ್ಯಾಯಮೂರ್ತಿಗಳು ಬರುವುದರಿಂದ ಸಂಪೂರ್ಣ ಕನ್ನಡ ಬಳಕೆ ಸುಲಭ ಸಾಧ್ಯವಲ್ಲ ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ, ಕಾರ್ಯದರ್ಶಿ ಕೆ. ಮುರಳೀಧರ ಮತ್ತಿತರರು ಉಪಸ್ಥಿತರಿದ್ದರು.
ಪ್ರಶಸ್ತಿ ಪ್ರದಾನ: ಕನ್ನಡದಲ್ಲಿ ತೀರ್ಪು ನೀಡಿದ 35 ನ್ಯಾಯಾಧೀಶರು, ಕನ್ನಡ ದಲ್ಲಿ ವಾದ ಮಂಡಿಸಿದ 10 ಸರ್ಕಾರಿ ಅಭಿಯೋಜಕರು, 20 ವಕೀಲರಿಗೆ 2017-18ನೇ ಸಾಲಿನ ಹಾಗೂ 2018-19ರಲ್ಲಿ ಕನ್ನಡದಲ್ಲೇ ತೀರ್ಪು ಬರೆಸಿದ 37 ನ್ಯಾಯಾಧೀಶರಿಗೆ ‘ನ್ಯಾಯಾಂಗದಲ್ಲಿ ಕನ್ನಡ’ ಪ್ರಶಸ್ತಿ ನೀಡಲಾಯಿತು.
ಬ್ಯಾಂಕ್ ಕ್ಷೇತ್ರದಲ್ಲೂ ಕನ್ನಡವಿರಲಿ
ಇಂದು ನ್ಯಾಯಾಂಗ ಕ್ಷೇತ್ರದಲ್ಲಷ್ಟೇ ಅಲ್ಲ. ರಾಷ್ಟ್ರೀಕೃತ ಬ್ಯಾಂಕ್ಗಳಲ್ಲೂ ಕನ್ನಡ ಬಳಕೆ ಕಡಿಮೆಯಾಗುತ್ತಿರುವುದರಿಂದ, ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ರೈತರು ತೀವ್ರ ಸಂಕಷ್ಟ ಎದುರಿಸುತ್ತಿ ದ್ದಾರೆ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು. ಬ್ಯಾಂಕ್ಗಳಲ್ಲಿ ಸಾಲ ಪಡೆವಾಗ ಪಿತ್ರಾರ್ಜಿತ ಆಸ್ತಿ, ಮಾನ ಮರ್ಯಾದೆಯನ್ನು ಅಡವಿಟ್ಟಿದ್ದೇವೆ ಎಂಬುದು ಕೋರ್ಟ್ಗಳ ಡಿಕ್ರಿ ಆಗುವವರೆಗೆ ಅವರಿಗೆ ಗೊತ್ತೇ ಆಗುವುದಿಲ್ಲ. ಆದ್ದರಿಂದ, ಕನಿಷ್ಠ ಪಕ್ಷ ಹಳ್ಳಿಗಳಲ್ಲಾದರೂ ಬ್ಯಾಂಕ್ಗಳಲ್ಲಿ ಕನ್ನಡ ಬರುವ ಅಧಿಕಾರಿಗಳನ್ನು ನೇಮಿಸಬೇಕು. ಸರ್ಕಾರ ಈ ಕುರಿತು ಅಧಿಸೂಚನೆ ಹೊರಡಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಮಾಧುಸ್ವಾಮಿ ಮನವಿ ಮಾಡಿದರು.
ಪ್ರಾಥಮಿಕ ಶಿಕ್ಷಣ ಭಾಷಾ ನೀತಿ ಪಾಲಕರ ವಿವೇಚನೆಗೆ ಬಿಟ್ಟಿದ್ದು ಎಂದು ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಮರುಪರಿಶೀಲನೆಗೆ ಅರ್ಜಿ ಸಲ್ಲಿಸಬೇಕಿದೆ. ಇಲ್ಲವಾದರೆ ದೇಶದ ಪ್ರಾದೇಶಿಕ ಭಾಷೆಗಳಿಗೆ ಉಳಿಗಾಲ ಇರುವುದಿಲ್ಲ. | ಸಿ.ಟಿ. ರವಿ ಕನ್ನಡ ಮತ್ತು ಸಂಸ್ಕೃತಿ ಸಚಿವ