ಕನಕದಾಸರ ಸಾಹಿತ್ಯ ಜನಮನ ತಲುಪಲಿ: ಮಾಜಿ ಸಚಿವ ಎಚ್.ಎಂ. ರೇವಣ್ಣ ಇಂಗಿತ

27
Published on

ಮೈಸೂರು: ಬಹುಮುಖ ವ್ಯಕ್ತಿತ್ವದ ಕನಕದಾಸರ ಸಾಹಿತ್ಯ ಜನಮನವನ್ನು ತಲುಪಬೇಕಿದೆ ಎಂದು ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ, ಮಾಜಿ ಸಚಿವ ಎಚ್.ಎಂ. ರೇವಣ್ಣ ಹೇಳಿದರು.
ಜನಪರ ಸಾಹಿತ್ಯ ಪರಿಷತ್ತು, ಡಾ.ಎಂ.ಶಾಂತಾ ರಾಮಕೃಷ್ಣ ಅಭಿಮಾನಿಗಳ ಸಂಘ, ಸ್ವಾಮಿ ಎಂ.ರಾಜೇಶ್ ಅಭಿಮಾನಿಗಳ ಬಳಗದಿಂದ ನಗರದ ರೋಟರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕನಕಮಾರ್ಗ ಸಿನಿಮಾ ಪ್ರದರ್ಶನ, ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಡಾ.ಎಚ್.ಜೆ.ಲಕ್ಕಪ್ಪಗೌಡ, ಡಾ.ಬಿ.ಕೆ.ರವಿ, ಕಾ.ತ.ಚಿಕ್ಕಣ್ಣ ಅವರ ಸಹಕಾರದಿಂದ ಕನಕ ಸಾಹಿತ್ಯ ಕುರಿತು 15 ಸಂಪುಟಗಳನ್ನು ಹೊರ ತರಲಾಗಿದೆ. ಕನಕರ ಸಂದೇಶವನ್ನು 14 ಭಾಷೆಗಳಿಗೆ ಅನುವಾದಿಸಲಾಗಿದ್ದು, ಎಲ್ಲರಿಗೂ ತಲುಪುವ ಪ್ರಯತ್ನ ನಡೆಸಲಾಗಿದೆ. ಬಹುಮುಖ ವ್ಯಕ್ತಿತ್ವದ ಕನಕದಾಸರ ಸಾಹಿತ್ಯ ಜನಮನ ತಲುಪಬೇಕಾಗಿದೆ ಎಂದು ಹೇಳಿದರು.
ಕನಕದಾಸರ ಕುರಿತ ‘ಕನಕಮಾರ್ಗ’ ಚಲನಚಿತ್ರಕ್ಕೆ ರಾಜ್ಯ ಸರ್ಕಾರ ತೆರಿಗೆ ವಿನಾಯಿತಿ ನೀಡಿದ್ದು, ಇದು ಎಲ್ಲೆಡೆ ಪ್ರದರ್ಶನವಾಗಿ, ಕನಕರ ಸಂದೇಶ ಪ್ರಸಾರವಾಗಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೆರಿಗೆ ವಿನಾಯಿತಿ ನೀಡಿದ್ದಾರೆ. ಆದ್ದರಿಂದ ಈ ಚಿತ್ರ ಹೆಚ್ಚು ಹೆಚ್ಚು ಪ್ರದರ್ಶನವಾಗಬೇಕು ಎಂದು ಕೋರಿದರು.
ಕೊಳ್ಳೇಗಾಲದ ಮಾನಸ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ಎಸ್.ದತ್ತೇಶ್‌ಕುಮಾರ್ ಅಭಿನಂದನಾ ಭಾಷಣ ಮಾಡಿ, ಇಂದು ಯುವಕರು ಮೊಬೆಲ್, ಟಿವಿ, ಬೈಕ್, ಕಾರು ಎಂದುಕೊಂಡು ತಂದೆ-ತಾಯಿಯನ್ನು ಮರೆತಿದ್ದಾರೆ. ಪ್ರತಿಭಾವಂತರು ದೇಶದ ಅನ್ನದ ಋಣ ತೀರಿಸುವ ಬದಲು ವಿದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಹೀಗಾಗಿ ಕನಕಮಾರ್ಗ ಚಿತ್ರವನ್ನು ಶಿಕ್ಷಣ ಇಲಾಖೆಯ ಮೂಲಕ ಎಲ್ಲ ವಿದ್ಯಾರ್ಥಿಗಳಿಗೆ ಪ್ರದರ್ಶಿಸುವ ಕೆಲಸ ಆಗಬೇಕು ಎಂದರು.
ಕನಕದಾಸರು ಹಾಗೂ ಪುರಂದರ ದಾಸರು ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳೆಂದೇ ಹೆಸರಾಗಿದ್ದಾರೆ. ಪ್ರಸ್ತುತ ಸ್ವಾರ್ಥದ ಸಮಾಜದಲ್ಲಿ ಜನಪರ ಕಾಳಜಿವುಳ್ಳ ಕನಕರ ಚಿಂತನೆ ಪ್ರಚಾರವಾಗಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ವಿಧಾನ ಪರಿಷತ್ ಮಾಜಿ ಉಪ ಸಭಾಪತಿ ಮರಿತಿಬ್ಬೇಗೌಡ ಮಾತನಾಡಿ, ಸಂತಶ್ರೇಷ್ಠರಾದ ಕನಕದಾಸರು ವಿಶ್ವಗುರುವಾಗಿದ್ದರು. ಭಕ್ತಿಮಾರ್ಗದಲ್ಲಿ ಬದುಕು ನಡೆಸುವುದನ್ನು ತೋರಿಸಿದರು. ಕೀರ್ತನೆಗಳು ಮಾತ್ರವಲ್ಲದೆ ಸಾಹಿತ್ಯವನ್ನು ರಚಿಸಿ, ಅಹಂಕಾರ ಬಿಡಿ, ಕುಲಕುಲವೆಂದು ಹೊಡೆದಾಡದಿರಿ ಎಂದು ಸಾರಿದರು ಎಂದರು.
ಕೊಪ್ಪಳ ವಿಶ್ವ ವಿದ್ಯಾಲಯದ ಕುಲಪತಿ ಡಾ.ಬಿ.ಕೆ. ರವಿ ಮಾತನಾಡಿ, ಎಂಬತ್ತರ ದಶಕದಿಂದ ಈಚೆಗೆ ಕನಕದಾಸರ ಸಂದೇಶಗಳ ಪ್ರಚಾರ ಆರಂಭವಾಯಿತು. ಇದಕ್ಕೆ ಸಿದ್ದರಾಮಯ್ಯ, ಎಚ್.ಎಂ. ರೇವಣ್ಣ, ಎಚ್. ವಿಶ್ವನಾಥ್ ಅವರು ಕಾರಣ. ಕನಕ ಗುರುಪೀಠ ಆರಂಭವಾದ ನಂತರ ದೊಡ್ಡಮಟ್ಟದಲ್ಲಿ ಸಂಘಟನೆಯಾಯಿತು. ಐದು ಜನರಿಂದ ಆರಂಭವಾದ ಕನಕ ಚಳವಳಿ ಈಗ 50 ಲಕ್ಷ ಜನರನ್ನು ತಲುಪಿದೆ ಎಂದು ವಿವರಿಸಿದರು.
ಕೆ.ಆರ್.ನಗರದ ಕನಕಗುರು ಪೀಠದ ಶ್ರೀಶಿವಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಶೆಫರ್ಡ್ಸ್ ಇಂಡಿಯಾ ಇಂಟರ್ ನ್ಯಾಷನಲ್ ರಾಷ್ಟ್ರೀಯ ಮಹಿಳಾ ಘಟಕದ ಅಧ್ಯಕ್ಷೆ ಕೆ.ಆರ್.ಪ್ರಭಾವತಿ, ಜನಪರ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಡಾ.ಡಿ.ರವಿ, ರಾಜ್ಯ ನಿರ್ದೇಶಕಿ ಎಂ.ಶಾಂತಾ ರಾಮಕೃಷ್ಣ, ಸ್ವಾಮಿ ಎಂ.ರಾಜೇಶ್, ಜನಪರ ಪರಿಷತ್ ರಾಜ್ಯಾಧ್ಯಕ್ಷ ಡಾ.ಎಂ.ಮಹೇಶ್ ಚಿಕ್ಕಲ್ಲೂರು, ಉಪಾಧ್ಯಕ್ಷ ಸಾಲುಂಡಿ ದೊರೆಸ್ವಾಮಿ ಇತರರು ಇದ್ದರು.
ಕನಕಮಾರ್ಗ ಪ್ರಶಸ್ತಿ ಪುರಸ್ಕೃತರು
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ ಕನಕ ಮಾರ್ಗ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.
ಕೊಪ್ಪಳ ವಿವಿ ಕುಲಪತಿ ಡಾ.ಬಿ.ಕೆ.ರವಿ, ರಾಜ್ಯ ಕುರುಬರ ಸಂಘದ ಮಾಜಿ ಅಧ್ಯಕ್ಷ ಬಿ.ಸುಬ್ರಹ್ಮಣ್ಯ, ಡಿಎಚ್‌ಒ ಡಾ.ಪಿ.ಸಿ.ಕುಮಾರಸ್ವಾಮಿ, ಮಾಜಿ ಮೇಯರ್ ಪುಷ್ಪಲತಾ ಚಿಕ್ಕಣ್ಣ, ಪಾಲಿಕೆ ಮಾಜಿ ಸದಸ್ಯ ಎಂ. ಶಿವಣ್ಣ, ಮೆಸೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎಂ. ಮಹದೇವಸ್ವಾಮಿ, ಮದ್ರಾಸ್ ವಿವಿ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಎಂ.ರಂಗಸ್ವಾಮಿ, ಕೆ.ಆರ್.ಆಸ್ಪತ್ರೆ ೆದ್ಯ ಡಾ.ಪ್ರದೀಪ್, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಬಿ. ಸೋಮೇಗೌಡ, ಕೊಡಗು ವಿವಿ ಸಿಂಡಿಕೇಟ್ ಸದಸ್ಯೆ ಡಾ.ಕಾವೇರಿ ಪ್ರಕಾಶ್, ಮೆಸೂರು ಕೋ-ಆಪರೇಟಿವ್ ಬ್ಯಾಂಕಿನ ಅಧ್ಯಕ್ಷೆ ಪಿ.ರಾಜೇಶ್ವರಿ, ಎಂ. ಹೇಮಾವತಿ, ಚಿಕ್ಕಮಗಳೂರಿನ ಜೆ.ಎಸ್.ರೇಖಾ ಹುಲಿಯಪ್ಪಗೌಡ, ಎಂ.ಮಹೇಂದ್ರ ಕಾಗಿನೆಲೆ, ಆರ್.ಸುಮಿತ್, ಎಸ್.ಎಂ.ಮನೋಹರ್, ಡಿ.ಕೆ.ಗಿರೀಶ್, ವಿ.ಅಂಜನಪ್ಪ, ಎಚ್.ಬ್ರಹ್ಮಲಿಂಗಯ್ಯ, ಎಸ್. ಲಕ್ಷ್ಮೀ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net