ಕಮಲಹಾಸನ್ ಕನ್ನಡದ ಇತಿಹಾಸ ಅರಿತುಕೊಳ್ಳಲಿ

Shri-Pralhad-Joshi-2
Published on

ಹುಬ್ಬಳ್ಳಿ : ಎಂಟನೇ ಶತಮಾನದಲ್ಲಿಯೇ ಕವಿರಾಜ ಮಾರ್ಗ ರಚನೆಯಾಗಿತ್ತು. ಇದನ್ನು ಗಮನಿಸಿದರೆ ಕನ್ನಡ ಭಾಷೆಯ ಇತಿಹಾಸ ಎಷ್ಟಿದೆ ಎಂಬುದು ಗೊತ್ತಾಗುತ್ತದೆ. ತಮಿಳು ನಟ ಕಮಲಹಾಸನ್ ಅವರಿಗೆ ಇದನ್ನೇ ತಿಳಿಸಿಕೊಡಬೇಕು. ಈ ವಿಚಾರದಲ್ಲಿ ರಾಜ್ಯ ಸರ್ಕಾರ ಮೌನ ವಹಿಸದೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಎಲ್ಲ ಭಾಷೆಗಳನ್ನು ಗೌರವಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಈ ಬಗ್ಗೆ ಕಮಲಹಾಸನ್​ಗೆ ಅರಿವು ಇರಬೇಕು. ಅತ್ಯಂತ ಪುರಾತನವಾದ ಕನ್ನಡ ಭಾಷೆಯ ಬಗ್ಗೆ ಕಮಲಹಾಸನ್ ವೈಜ್ಞಾನಿಕ ಆಧಾರವಿಲ್ಲದೆ ಮಾತನಾಡಿದ್ದಾರೆ. ತಮಿಳು ಮತ್ತು ಕನ್ನಡ ಎರಡೂ ಅತ್ಯಂತ ಪುರಾತನವಾದ ಭಾಷೆಗಳು ಎಂದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದೆ. ಮೂಲಭೂತವಾದಿಗಳು ಮತ್ತು ಭಯೋತ್ಪಾದಕರು ಕರ್ನಾಟಕವನ್ನು ಸೇಫ್​ಹೌಸ್ ಎಂದುಕೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ನೀತಿಯೇ ಇದಕ್ಕೆಲ್ಲ ಕಾರಣ ಎಂದು ಕಿಡಿಕಾರಿದರು.

ಪ್ರಮುಖ 43 ಕ್ರಿಮಿನಲ್ ಪ್ರಕರಣಗಳನ್ನು ಖುಲಾಸೆಗೊಳಿಸುವಂತೆ ಸರ್ಕಾರ ಮನವಿ ಮಾಡುವ ಮೂಲಕ ರಾಜ್ಯದ ಜನರ ಮುಂದೆ ಬೆತ್ತಲಾಗಿದೆ. ಮುಂಬೈ ದಾಳಿ ನಡೆದಾಗ ಅದರಲ್ಲಿ ಆರ್​ಎಸ್​ಎಸ್ ಕೈವಾಡ ಎಂದಿದ್ದ ದಿಗ್ವಿಜಯ ಸಿಂಗ್ ಮಾದರಿಯಲ್ಲೇ ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಎಷ್ಟು ಭಯೋತ್ಪಾದನೆ ಘಟನೆಗಳು ನಡೆದಿವೆ ಹಾಗೂ ಮೋದಿ ಆಡಳಿತದಲ್ಲಿ ಭಯೋತ್ಪಾದನೆ ಎಷ್ಟು ನಿಯಂತ್ರಣಕ್ಕೆ ಬಂದಿದೆ ಎಂಬುದನ್ನು ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್​ನ ಎಲ್ಲ ನಾಯಕರು ಅರಿತುಕೊಳ್ಳಬೇಕು ಎಂದು ಹೇಳಿದರು.

ಆಪರೇಷನ್ ಸಿಂಧೂರ ನಂತರ ವಿಶೇಷ ಅಧಿವೇಶನ ಕರೆಯುವಂತೆ ಕಾಂಗ್ರೆಸ್ ನಾಯಕರು ಪಟ್ಟು ಹಿಡಿದಿದ್ದಾರೆ. ಪಾಕಿಸ್ತಾನ ವಿಶೇಷ ಅಧಿವೇಶನ ನಡೆಸಿದ್ದರಿಂದ ನಾವೂ ಅಧಿವೇಶನ ಕರೆಯಬೇಕೆಂದು ಒತ್ತಾಯಿಸುತ್ತಿದ್ದಾರೆ. ಕೆಲವರಂತೂ ಪಾಕಿಸ್ತಾನಕ್ಕೆ ಸಿಂಧೂ ನದಿ ನೀರು ಬಿಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net