

ಅಥಣಿ: ಜೀವಂತ ಸತ್ಯ ಮತ್ತು ನೈಜ ಸಂಗತಿಗಳನ್ನು ವರದಿ ಮಾಡುವ ಮುದ್ರಣ ಮಾಧ್ಯಮ ಉಳಿಸಿ-ಬೆಳೆಸಬೇಕಾಗಿರುವುದು ಅವಶ್ಯವಾಗಿದೆ. ಪತ್ರಿಕಾ ಮೌಲ್ಯ ಕಾಪಾಡುವುದು ಪ್ರತಿಯೊಬ್ಬ ವರದಿಗಾರನ ಜವಾಬ್ದಾರಿ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಪಟ್ಟಣದ ಕೆಎಲ್‌ಇ ಸಂಸ್ಥೆಯ ಎಸ್‌ಎಂಎಸ್ ಮಹಾವಿದ್ಯಾಲಯದ ಖೋತ ಸಭಾಂಗಣದಲ್ಲಿ ಅಥಣಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೋಮವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಮತ್ತು ಸಾಧಕರ ಸತ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮುದ್ರಣ, ದಶ್ಯ, ಸೋಷಿಯಲ್ ಮೀಡಿಯಾ ಹಾಗೂ ಯೂಟ್ಯೂಬ್ ಮಾಧ್ಯಮಗಳ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಮುದ್ರಣ ಮಾಧ್ಯಮ ಮಾತ್ರ ಸತ್ಯಕ್ಕೆ ಸಮೀಪವಿರುವ ಸುದ್ದಿ ಪ್ರಕಟಿಸುವ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ನಿರಂತರ ಶ್ರಮಿಸುತ್ತಿದೆ ಎಂದರು.
ಮಾಜಿ ಶಾಸಕರಾದ ಮಹೇಶ ಕುಮಠಳ್ಳಿ, ಶಹಜಹಾನ ಡೊಂಗರಗಾವ ಮಾತನಾಡಿ, ಪತ್ರಿಕೆಗಳು ಬದುಕಿನ ಕೈಗನ್ನಡಿ ಇದ್ದ ಹಾಗೆ. ಪತ್ರಿಕೆ ಓದಬೇಕು. ಪತ್ರಕರ್ತರಿಗೆ ಬದುಕಿನ ಸುರಕ್ಷತೆ, ಭದ್ರತೆ ಒದಗಿಸುವ ಕಾರ್ಯ ಸರ್ಕಾರ ಮಾಡಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಗಚ್ಚಿನಮಠದ ಶಿವಬಸವ ಸ್ವಾಮೀಜಿ ಮಾತನಾಡಿ, ಪತ್ರಿಕಾ ಮಾಧ್ಯಮ ಅತ್ಯಂತ ಪ್ರಬಲವಾಗಿದ್ದು, ಇತಿಹಾಸ ಪುಟದಿಂದಲೂ ಖಡ್ಗಕ್ಕಿಂತ ಲೇಖನಿ ಹರಿತ ಎಂಬ ಮಾತು ಋಜುವಾತಾಗಿದೆ ಎಂದರು.
ಪತ್ರಕರ್ತ ರಾಜು ಗಾಲಿ ಪ್ರಾಸ್ತಾವಿಕ ಮಾತನಾಡಿ, ಪತ್ರಿಕೆಗಳು ಈ ದೇಶದ ಅಭ್ಯುದಯಕ್ಕೆ ಮಹತ್ವದ ಕೊಡುಗೆ ನೀಡುತ್ತಿವೆ ಎಂದರು.
ಜಮಖಂಡಿಯ ಉಪನ್ಯಾಸಕ ಡಾ. ಯಶವಂತ ಕೊಕ್ಕನವರ ಮಾತನಾಡಿ, ಅಥಣಿಯಲ್ಲಿ ಪತ್ರಿಕಾ ಭವನ ನಿರ್ಮಾಣವಾಗಬೇಕು ಎಂದರು.
ಈಚೆಗೆ ನಿಧನರಾದ ಹಿರಿಯ ಪತ್ರಕರ್ತ ಚನ್ನಯ್ಯ ಇಟ್ನಾಳಮಠ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ವರ್ಷದ ಅವಧಿಯ ಅಂಚೆ ಇಲಾಖೆಯ ಅಪಘಾತ ವಿಮೆ ಬಾಂಡ್ ಪತ್ರಕರ್ತರಿಗೆ ವಿತರಿಸಲಾಯಿತು.
ರಸಪ್ರಶ್ನೆ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಾಧಕರಾದ ಡಾ.ಬಾಳಾಸಾಹೇಬ ಲೋಕಾಪುರ, ಪ್ರಶಾಂತ ಗೌರಾಣಿ, ಅಶೋಕ ಪೂಜಾರಿ, ಸುನಂದಾ ಘಟಕಾಂಬಳೆ, ಮಧುರಾ ಜೀರಗ್ಯಾಳ ಅವರನ್ನು ಸತ್ಕರಿಸಲಾಯಿತು.
ಕೆಎಲ್‌ಇ ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಹಂಜಿ, ಪ್ರಾಚಾರ್ಯ ಡಾ.ಪ್ರಶಾಂತ ಮಗದುಮ್ಮ, ಸಿಪಿಐ ಸಂತೋಷ ಹಳ್ಳೂರ, ಸಂಘದ ಅಧ್ಯಕ್ಷ ಪರಶುರಾಮ ನಂದೇಶ್ವರ, ಹಿರಿಯರಾದ ಅರುಣ ಯಲಗುದ್ರಿ, ಆನಂದ ಟೊಣಪಿ, ಸುನೀತಾ ಐಹೊಳೆ, ಜಯಾ ಕಾಂಬಳೆ, ಪ್ರಶಾಂತ ತೊಡಕರ, ಶಾನೂರ ಚಿಂಚಲಿ, ಆರ್.ಡಿ.ಧರಿಗೌಡ, ಮಲ್ಲಿಕಾರ್ಜುನ ಗಂಗಾಧರ, ವರದಿಗಾರರಾದ ಶಿವಕುಮಾರ ಅಪರಾಜ, ರಮೇಶ ಬಾದವಾಡಗಿ, ಅಣ್ಣಾಸಾಬ ತೆಲಸಂಗ, ವಿಜಯ ಅಡಹಳ್ಳಿ, ರಾಮಣ್ಣ ದೊಡ್ಡನಿಂಗಪಗೊಳ, ಶೇಖರ ತೇವರಟ್ಟಿ, ಸಂತೋಷ ಬಡಕಂಬಿ, ರಾಕೇಶ ಮೈಗೂರ, ಅಜಿತ ಕಾಂಬಳೆ, ವಿಲಾಸ ಕಾಂಬಳೆ, ಶಿವಾನಂದ ಪೂಜಾರಿ, ಸಿದ್ದಯ್ಯ ಹಿರೇಮಠ, ಯಾಸಿನ್ ಜಾರೆ, ಕಲ್ಲಪ್ಪ ಕನಾಳ, ಮಂಜು ಹೊಳಿಕಟ್ಟಿ ಇತರರಿದ್ದರು.