

ಬ್ಯಾಡಗಿ: ಸಮಾಜದ ಬೆಳವಣಿಗೆಯಲ್ಲಿ ಪತ್ರಕರ್ತರ ಪಾತ್ರ ಹಿರಿದಾಗಿದ್ದು, ಪತ್ರಿಕೋದ್ಯಮದಲ್ಲಿ ಹೊಸ ಹೊಸ ತಂತ್ರಜ್ಞಾನ ಬಳಸಿಕೊಂಡು ಜಾಗೃತಿಯಿಂದ ವೃತ್ತಿ ನಿರ್ವಹಿಸಬೇಕಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ ಹೇಳಿದರು.
ಇಲ್ಲಿನ ವರ್ತಕರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಸಮ್ಮೇಳನ, ಜಿಲ್ಲಾ ಘಟಕದ ರಜತ ಮಹೋತ್ಸವ ಸಮಾರಂಭ ಹಾಗೂ ಬ್ಯಾಡಗಿ ತಾಲೂಕು ಘಟಕದ ನೂತನ ಕಾರ್ಯಾಲಯ ಉದ್ಘಾಟಿಸಿ ಅವರು ಮಾತನಾಡಿದರು.
ಬ್ಯಾಡಗಿಯ ಮೆಣಸಿನಕಾಯಿ ಘಾಟು ವಿಶ್ವದಾದ್ಯಂತ ಹರಡಿದೆ. ಇಲ್ಲಿನ ಜನರ ಮನಸು ಸಿಹಿಯಾಗಿದ್ದು, ಪ್ರೀತಿಯನ್ನು ಮರೆಯಲು ಸಾಧ್ಯವಿಲ್ಲ. ಸ್ವಾತಂತ್ರ್ಯ ಬಳಿಕ ದೇಶ ಸಾಕಷ್ಟು ಪ್ರಗತಿ ಹೊಂದಿದ್ದು, ಮಾಧ್ಯಮಗಳು ದೊಡ್ಡ ಮಟ್ಟದಲ್ಲಿ ಬೆಳೆದಿವೆ. ತಂತ್ರಜ್ಞಾನ ಎಷ್ಟು ಮುಖ್ಯವೋ ಅಷ್ಟೇ ಅಪಾಯಕಾರಿಯೂ ಹೌದು. ಪತ್ರಕರ್ತರು ಹೊಸ ಆವಿಷ್ಕಾರ, ತಂತ್ರಜ್ಞಾನ ಬಳಸಿಕೊಂಡಿದ್ದು, ಈಗ ಸ್ವಲ್ಪ ಮಟ್ಟಿಗೆ ನಿರಾಳರಾಗಿದ್ದಾರೆ. ಪತ್ರಕರ್ತರ ನಿವೇಶನ ಬೇಡಿಕೆಗಳನ್ನು ಪರಿಶೀಲಿಸಿ ನ್ಯಾಯ ಒದಗಿಸಲಾಗುವುದು ಎಂದರು.
ಕಾನಿಪ ಸಂಘದ ಅಧ್ಯಕ್ಷ ಶಿವಾನಂದ ತಗಡೂರ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುವುದು ಸವಾಲಿನ ಕೆಲಸ. ವಾಸ್ತವ ಘಟನೆಯ ಮೇಲೆ ಕನ್ನಡಿ ಹಿಡಿಯುವುದು ಪತ್ರಕರ್ತರ ಕೆಲಸ. ಪವಿತ್ರವಾದ ವೃತ್ತಿಯ ಮೇಲೆ ಸಮಾಜ ನಂಬಿಕೆ ಇಟ್ಟುಕೊಂಡಿದೆ. ನಾನೂ ಪತ್ರಕರ್ತ ಎಂಬ ಲೇಬಲ್ ಬಳಸಿಕೊಂಡು ಬೇರೆ ಬೇರೆ ಕೆಲಸ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಪತ್ರಕರ್ತರನ್ನು ಸಮಾಜ ಸದುದ್ದೇಶಕ್ಕಾಗಿ ಬಳಸಿಕೊಳ್ಳಬೇಕು. ಡಿ.ವಿ.ಗುಂಡಪ್ಪನವರು ಸ್ಥಾಪಿಸಿದ ಪತ್ರಕರ್ತರ ಸಂಘಟನೆ ದೇಶದಲ್ಲೇ ಬೃಹತ್ ಸಂಘಟನೆಯಾಗಿದೆ. ಪುರಸಭೆ ಹಾಗೂ ಶಾಸಕರು ತಾಲೂಕು ಘಟಕಕ್ಕೆ ನಿವೇಶನ ಕೊಡಿಸಬೇಕು ಎಂದು ಮನವಿ ಮಾಡಿದರು. ಇದಕ್ಕೂ ಮುನ್ನ ಪತ್ರಕರ್ತರ ಕಾರ್ಯಾಲಯ ಉದ್ಘಾಟಿಸಿದರು.
ಕಾನಿಪ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಕುರುವತ್ತೇರ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತ ಪ್ರಕಾಶ ಜೋಶಿ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಜಮೀರ ರಿತ್ತಿ ಅವರನ್ನು ಸನ್ಮಾನಿಸಲಾಯಿತು. ಶಾಸಕ ಬಸವರಾಜ ಶಿವಣ್ಣನವರ, ಗ್ಯಾರಂಟಿ ಯೋಜನೆ ಪ್ರಾಧಿಕಾರ ಉಪಾಧ್ಯಕ್ಷ ಎಸ್.ಆರ್. ಪಾಟೀಲ, ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ, ಜಿಲ್ಲಾಧಿಕಾರಿ ವಿಜಯಕುಮಾರ ದಾನಮ್ಮನವರ, ಪುರಸಭೆ ಅಧ್ಯಕ್ಷ ಬಾಲಚಂದ್ರಗೌಡ್ರ ಪಾಟೀಲ, ಉಪಾಧ್ಯಕ್ಷ ಸುಭಾಸ ಮಾಳಗಿ, ತಹಸೀಲ್ದಾರ್ ಫಿರೋಜ್ಷಾ ಸೋಮನಕಟ್ಟೆ, ತಾ.ಪಂ. ಇಒ ಕೆ.ಎಂ. ಮಲ್ಲಿಕಾರ್ಜುನ, ಮುಖ್ಯಾಧಿಕಾರಿ ವಿನಯಕುಮಾರ ಹೊಳೆಯಪ್ಪಗೋಳ, ಸಾಹಿತಿ ಸಂಕಮ್ಮ ಸಂಕಣ್ಣನವರ, ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ, ಪ್ರಾಚಾರ್ಯ ಜಿ.ಎಸ್. ವೈದ್ಯ, ಕಾನಿಪ ಕಾರ್ಯದರ್ಶಿ ಜಿ.ಸಿ. ಲೋಕೇಶ, ನಿಂಗಪ್ಪ ಚಾವಡಿ, ಪತ್ರಕರ್ತರಾದ ಕೇಶವಮೂರ್ತಿ ವಿ.ಬಿ., ವೀರೇಶ ಮಡ್ಲೂರ, ಪರಶುರಾಮ ಸತ್ಯಪ್ಪನವರ, ನಾರಾಯಣ ಹೆಗಡೆ, ವಿನಾಯಕ ಹುದ್ದಾರ, ಬಸಯ್ಯ ಹಿರೇಮಠ, ಶಿವಯೋಗಿಸ್ವಾಮಿ ಮಹಾನುಭಾವಿಮಠ, ಪುರಸಭೆ ಸದಸ್ಯ ಬಸವರಾಜ ಛತ್ರದ, ಗಂಗಣ್ಣ ಎಲಿ, ಚಿಕ್ಕಪ್ಪ ಛತ್ರದ, ದಾನಪ್ಪ ಚೂರಿ, ಶಿವಯೋಗಿ, ವಕೀಲ ಶಂಕರ ರ್ಬಾ, ಪ್ರಕಾಶ ಬನ್ನಿಹಟ್ಟಿ, ತಾಲೂಕು ಕಾನಿಪ ಅಧ್ಯಕ್ಷ ಮಲ್ಲನಗೌಡ್ರ, ಉಪಾಧ್ಯಕ್ಷ ವೀರಯ್ಯಸ್ವಾಮಿ ಚೌಕೀಮಠ, ಟಿಪ್ಪು ಸುಲ್ತಾನ ಹುಲ್ಮನಿ, ಗಣೇಶ ಅರ್ಕಾಚಾರಿ, ಕೆ.ವಿ.ಹಿರೇಮಠ, ಮಹಾದೇವ ಕರಿಯಣ್ಣನವರ, ಇತರರಿದ್ದರು.