ಒಗ್ಗಟಿನಿಂದ ಸಮಾಜ ಕಟ್ಟುವ ಕೆಲಸವಾಗಲಿ

1
Published on

ವಿಜಯವಾಣಿ ಸುದ್ದಿಜಾಲ ತುರುವೇಕೆರೆ: ವಿಶ್ವ ಗುರು ಬಸವಣ್ಣ, ಬುದ್ಧ, ಡಾ.ಬಿ.ಆರ್​.ಅಂಬೇಡ್ಕರ್​ ಅವರು ಇಡೀ ವಿಶ್ವದ ಭೂಪಟದಲ್ಲಿನ ದೊಡ್ಡ ಸಂಪತ್ತು ಎಂದು ಕೇಂದ್ರ ಸಚಿವ ವಿ.ಸೋಮಣ್ಣ ತಿಳಿಸಿದರು.


ಪಟ್ಟಣದ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಟಕದಿಂದ ಭಾನುವಾರ ಹಮ್ಮಿಕೊಂಡಿದ್ದ ವಿಶ್ವಗುರು ಬಸವೇಶ್ವರ ಜಯಂತಿ ಹಾಗೂ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿ ಮಾತನಾಡಿ, 12ನೇ ಶತಮಾನದಲ್ಲಿಯೇ ಅನುಭವ ಮಂಟಪ ನಿರ್ಮಿಸಿದ್ದ ಬಸವಣ್ಣ ಅವರನ್ನು ಇಂದು ವಿಶ್ವವೇ ಮೆಚ್ಚಿದೆ. ಬಸವಣ್ಣ ಹಾಕಿಕೊಟ್ಟ ವಿಚಾರಧಾರೆ, ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದರು.

ಇವನ್ಯಾರವ ಇವನ್ಯಾರವ ಎನ್ನದೇ ಇವ ನಮ್ಮವ ಎನ್ನುವಂತೆ ವೀರಶೈವ ಲಿಂಗಾಯತ ಸಮಾಜ ಬಾಳಬೇಕಿದೆ. ಬೇರೆಯವರನ್ನು ಬಹಳ ಗೌರವ, ಪ್ರೀತಿ, ವಿಶ್ವಾಸದಿಂದ ಕಾಣುವ ಸಮಾಜ ಸಣ್ಣಪುಟ್ಟ ತಪ್ಪುಗಳಿಂದ ಗುಂಪುಗಳಾಗುತ್ತಿದೆ. ಇದನ್ನು ಬಿಟ್ಟು ಎಲ್ಲರೂ ಒಗ್ಗಾಟ್ಟಾಗಿ ಸಮಾಜ ಕಟ್ಟುವ ಕೆಲಸ ಮಾಡಬೇಕು ಎಂದರು.


ಕೇಂದ್ರ ಸಚಿವ ವಿ.ಸೋಮಣ್ಣ ಕಾರ್ಯಕ್ರಮಕ್ಕೆ ಆಗಮಿಸಲು ಎರಡು ಗಂಟೆ ತಡವಾಗಿದ್ದರಿಂದ ವೇದಿಕೆಯಲ್ಲಿ ಹಲವರು ಬಸವಣ್ಣನವರ ವಚನಗಳನ್ನು ಹಾಡಿ ರಂಜಿಸಿದರು. ಈ ವೇಳೆ ವೇದಿಕೆಯಲ್ಲಿದ್ದ ಶಾಸಕ ಎಂ.ಟಿ.ಕೃಷ್ಣಪ್ಪ ಮೈಕ್​ ಹಿಡಿದು ಚನ್ನಪ್ಪ ಚನ್ನೇಗೌಡ ಎಂಬ ಜಾನಪದ ಹಾಡು ಹಾಡಿ ಜನರನ್ನು ರಂಜಿಸಿದರು. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ ಹಾಗೂ ಮಾಜಿ ಸಂಸದ ಜಿ.ಎಸ್​.ಬಸವರಾಜು ಅವರನ್ನು ಸನ್ಮಾನಿಸಲಾಯಿತು.

ತಹಸೀಲ್ದಾರ್​ ಎ.ಎನ್​.ಕುಂ.ಇ.ಅಹಮದ್​, ಬಿಇಒ ಸೋಮಶೇಖರ್​, ಪಪಂ ಅಧ್ಯಕ್ಷೆ ಆಶಾ, ಸದಸ್ಯ ಯಜಮಾನ್​ ಮಹೇಶ್​, ನೊಳಂಬ ಲಿಂಗಾಯತ ಸಂಘದ ನಿರ್ದೇಶಕ ಎಂ.ದೇವರಾಜು, ರಾಜ್ಯ ಘಟಕದ ಪ್ರದಾನ ಕಾರ್ಯದರ್ಶಿ ನಟರಾಜ್​ ಸಾಗರನಹಳ್ಳಿ, ಜಿಲ್ಲಾಧ್ಯಕ್ಷ ಡಾ.ಪರಮೇಶ್​, ತಾಲೂಕು ಯುವ ಘಟಕದ ಅಧ್ಯಕ್ಷ ಎನ್​. ಯೋಗೀಶ್​ ಮತ್ತಿತರರು ಇದ್ದರು.

ಎಲ್ಲರಿಗೂ ಪ್ರತಿಭಾ ಪುರಸ್ಕಾರ ನೀಡಿ
ಬಸವಣ್ಣ ವೀರಶೈವ ಲಿಂಗಾಯತ ಸಮಾಜಕ್ಕೆ ಮಾತ್ರ ಸೀಮಿತರಾಗಿಲ್ಲ. ಪ್ರತಿಭಾ ಪುರಸ್ಕಾರವನ್ನು ಕೇವಲ ಲಿಂಗಾಯತ ಸಮಾಜಕ್ಕೆ ಮೀಸಲಾಗಿರಸದೇ 12ನೇ ಶತಮಾನದಲ್ಲಿಯೇ ಜಾತಿಯತೆ ತೊಡೆದು ಹಾಕಿ, ಸಮಾನತೆ ಸಾರಿದ ಮಹಾನ್​ ಪುರುಷರ ಆಶಯದಂತೆ ಮುಂದಿನ ದಿನಗಳಲ್ಲಿ ಎಲ್ಲ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ವಿತರಿಸಿ. ಇದಕ್ಕೆ ನಾನು ಸಹಕಾರ ನೀಡುತ್ತೇನೆ ಎಂದು ಸೋಮಣ್ಣ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net