

ನಾಪೋಕ್ಲು: ತುಳು ಭಾಷಿಗರು ಮತ್ತು ಬಿಲ್ಲವರು ತಮ್ಮ ಸಂಸ್ಕೃತಿಯನ್ನು ಯುವ ಜನಾಂಗಕ್ಕೆ ಪರಿಚಯಿಸುವ ಕೆಲಸ ಮಾಡಬೇಕಿದೆ ಎಂದು ವಾಗ್ಮಿ ಶ್ರೀನಿಧಿ ಬಂಟ್ವಾಳ ಹೇಳಿದರು.
ಇಲ್ಲಿನ ಕೊಡವ ಸಮಾಜದಲ್ಲಿ ಬಿಲ್ಲವ ಸಮಾಜ ವತಿಯಿಂದ ಆಯೋಜಿಸಲಾಗಿದ್ದ ಆಟಿಡೊಂಜಿ ದಿನ -2024 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ವರ್ಷದ ವಿವಿಧ ಕಾಲಮಾನಗಳಿಗೆ ತನ್ನದೇ ಆದ ಮಹತ್ವವಿದೆ. ಅದರಲ್ಲೂ ಆಟಿ ತಿಂಗಳಿಗೆ ವಿಶೇಷ ಮಹತ್ವ ಇದೆ. ಬಿರುಸಿನಿಂದ ಸುರಿಯುವ ಮಳೆಗಾಲದ ಈ ದಿನಗಳಲ್ಲಿ ಸಸ್ಯಗಳಲ್ಲಿ ಆಯುರ್ವೇದ ಅಂಶ ಹೆಚ್ಚು ಇರುವುದರಿಂದ ವೈವಿಧ್ಯಮಯ ತಿನಿಸುಗಳನ್ನು ಮಾಡಿ ಸೇವಿಸುವುದು ರೂಢಿಯಲ್ಲಿದೆ. ನಂತರದ ಸೋನೆ ತಿಂಗಳಿನಲ್ಲಿ ಸಮಾರಂಭಗಳಿಗೆ ಮಹತ್ವ ಇದೆ. ವರ್ಷದ ವಿವಿಧ ತಿಂಗಳನ್ನು ವೈವಿಧ್ಯಮಯವಾಗಿ ಆಚರಿಸುವ ಬಿಲ್ಲವ ಜನಾಂಗ ತುಳುನಾಡಿನ ಸಂಸ್ಕೃತಿಯ ಸಾರವನ್ನು ಮಕ್ಕಳಿಗೆ ತಿಳಿಸುವಂತಹ ಕೆಲಸ ಮಾಡಬೇಕಿದೆ ಎಂದರು.
ಮಡಿಕೇರಿ ಬಿಲ್ಲವ ಸಮಾಜದ ಅಧ್ಯಕ್ಷೆ ಲೀಲಾವತಿ ಮಾತನಾಡಿ, ಮೊಬೈಲ್, ಟಿವಿಯಂತಹ ಮಾಧ್ಯಮಗಳಿಂದ ಮಕ್ಕಳು ,ಯುವ ಜನಾಂಗ ಸಮಯ ವ್ಯರ್ಥ ಮಾಡುತ್ತಿದೆ. ವಿದ್ಯೆಯಿಂದಷ್ಟೇ ಮುಂದೆ ಬರಲು ಸಾಧ್ಯ ಹಾಗೂ ಸಮಾಜದಲ್ಲಿ ಉತ್ತಮ ಸ್ಥಾನ ಗಳಿಸಬೇ ಕಾದರೆ ವಿದ್ಯೆ ಮುಖ್ಯ ಎಂಬುದನ್ನು ಅರಿಯಬೇಕು. ಹಾಗಾಗಿ ಮಕ್ಕಳಿಗೆ ಸೂಕ್ತ ವಿದ್ಯಾಭ್ಯಾಸ ನೀಡಬೇಕು ಎಂದರು.
ಮಡಿಕೇರಿ ಬಿಲ್ಲವ ಸಮಾಜದ ಮಾಜಿ ಅಧ್ಯಕ್ಷ ಎಲಿಯಣ್ಣ ಪೂಜಾರಿ ಮಾತನಾಡಿ, ಸಂಘಟನೆಯಿಂದ ಯಶಸ್ಸು ಸಾಧ್ಯ ಎಂದರು.ಹಿಂದು ಮಲಯಾಳಿ ಸಂಘದ ನಾಪೋಕ್ಲು ಅಧ್ಯಕ್ಷ ಅನಿಲ್ ಮಾತನಾಡಿ, ಸಮಾಜದಲ್ಲಿ ವ್ಯಕ್ತಿ ಬೆಳೆದಂತೆ ಸಮಾಜ, ಸಂಸ್ಕೃತಿ, ಪದ್ಧತಿಗಳ ಬಗ್ಗೆ ಅರಿವು ಹೊಂದುತ್ತಾನೆ. ಅಲ್ಲದೆ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಸಂಘದ ಅವಶ್ಯಕತೆ ಇದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಲ್ಲವ ಸಂಘದ ಅಧ್ಯಕ್ಷ ಬಿ.ಎಂ.ಪ್ರತೀಪ, ಬಿಲ್ಲವ ಜನಾಂಗವನ್ನು ಒಗ್ಗೂಡಿಸುವ ಉದ್ದೇಶದಿಂದ ಸಂಘ ಸ್ಥಾಪಿಸಲಾಗಿದೆ. ಸಂಘದಲ್ಲಿ 217 ಸದಸ್ಯರಿದ್ದು, ರಕ್ತದಾನದಂತಹ ಸಮಾಜಮುಖಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಸಂಘ ಇತರರಿಗೆ ಮಾದರಿಯಾಗಿದೆ ಎಂದರು.
ಬಿಜೆಪಿ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಅಪ್ಪು ರವೀಂದ್ರ, ನೋಟರಿ ವಕೀಲರಾದ ದಯಾ ಹೊನ್ನಪ್ಪ ಮಾತನಾಡಿದರು. ಸಂಘದ ವತಿಯಿಂದ ಆಯೋಜಿಸಲಾಗಿದ್ದ ಶಿಬಿರದಲ್ಲಿ 70ಕ್ಕೂ ಅಧಿಕ ಜನರು ರಕ್ತದಾನ ಮಾಡಿದರು. ಬಳಿಕ ಸಂಘದ ಲೋಗೋ ಬಿಡುಗಡೆ ಮಾಡಲಾಯಿತು. ಪುಟಾಣಿ ಪ್ರತಿಭೆ ಸಿಂಚನಾ ಯೋಗ ಪ್ರದರ್ಶಿಸಿ ಜನ ಮೆಚ್ಚುಗೆಗೆ ಪಾತ್ರರಾದರು. ಕುಮಾರಿ ಸಿಂಚನ ಅವರ ಪ್ರತಿಭೆಯನ್ನು ಸಂಘದ ವತಿಯಿಂದ ಗುರುತಿಸಿ ಸನ್ಮಾನಿಸಲಾಯಿತು.
ಪುಟಾಣಿಗಳಾದ ವಿಸ್ಮಿತಾ, ಧೃತಿ ಮತ್ತು ಆಶಾ ಅವರ ಸ್ವಾಗತ ನೃತ್ಯ ಎಲ್ಲರನ್ನು ರಂಜಿಸಿತು. ಮಡಿಕೇರಿ ರಕ್ತ ನಿಧಿ ವಿಭಾಗದ ಸಿಬ್ಬಂದಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ್ದು, ಸಂಘದ ವತಿಯಿಂದ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ನಾಪೋಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ, ನಿವೃತ ಸೇನಾಧಿಕಾರಿ ಕ್ಯಾಪ್ಟನ್ ಪೂವಪ್ಪ, 50ಕ್ಕೂ ಅಧಿಕ ಬಾರಿ ರಕ್ತದಾನ ಮಾಡಿದ ರಾಮಪ್ಪ ಪೊಲೀಸ್, ಸಿವಿಲ್ ಕಂಟ್ರಾಕ್ಟರ್ ಗೋಪಾಲ್, ನಿವೃತ್ತ ಪೊಲೀಸ್ ಅಧಿಕಾರಿ ಲಿಂಗಪ್ಪ, ಸಂಘದ ಉಪಾಧ್ಯಕ್ಷ ವಸಂತ್ ಅರುಣ, ಸಂಘಟನಾ ಕಾರ್ಯದರ್ಶಿ ನಾಗರಾಜ್, ಖಜಾಂಚಿ ಬಿ.ಡಿ ದೀಪಕ್ ಇತರರಿದ್ದರು.