ಸನಾತನ ಧರ್ಮ ಉಳಿಸುವುದು ಪ್ರತಿಯೊಬ್ಬರ ಧ್ಯೇಯವಾಗಲಿ

SRP_22-03jpj
Published on

ಶ್ರೀರಂಗಪಟ್ಟಣ: ಭಾರತದ ಸನಾತನ ಧರ್ಮವನ್ನು ಉಳಿಸುವುದು ನಮ್ಮ ಧ್ಯೇಯವಾಗಿರಬೇಕು ಎಂದು ತುಮಕೂರು ಜಿಲ್ಲೆಯ ಬೆಳ್ಳಾವಿಯ ಶ್ರೀಕಾರ ಮಠದ ಶ್ರೀ ವೀರಬಸವ ಸ್ವಾಮೀಜಿ ಹೇಳಿದರು.

ಪಟ್ಟಣ ಹೊರವಲಯದ ಚಂದ್ರವನ ಆಶ್ರಮದಲ್ಲಿ ಸೋಮವಾರ ನವರಾತ್ರಿ ಆಚರಣೆ ಹಾಗೂ ಪೂಜಾ ಕೈಂಕರ್ಯಗಳಿಗೆ ಷಟ್‌ಸ್ಥಲ ಧ್ವಜಾರೋಹಣವನ್ನು ಸ್ವಾಮೀಜಿಗಳ ನೇತೃತ್ವದಲ್ಲಿ ನೆರವೇರಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.

ನವರಾತ್ರಿ ಸಂದರ್ಭದಲ್ಲಿ ಉಪವಾಸ ಮತ್ತು ಮೌನ ಅನುಷ್ಠಾನದಲ್ಲಿರುವ ಡಾ.ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿಗಳ ದಿವ್ಯ ದರ್ಶನಾಶೀರ್ವಾದ ಪಡೆದರೆ 9 ದೇವರನ್ನು ಪೂಜಿಸಿದಷ್ಟು ಫಲ ದೊರೆಯುತ್ತದೆ. ಮಾನವ ಮತ್ತು ಭಗವಂತನಲ್ಲಿನ ವ್ಯತ್ಯಾಸವನ್ನು ಅರಿತವನೇ ಯೋಗಿ ಎಂದರು.

ಪೀಠಾಧಿಪತಿ ಶ್ರೀ ತ್ರಿನೇತ್ರ ಮಹಂತ ಶ್ರೀ ಮಾತನಾಡಿ, ಮನೆ ಇಲ್ಲವೆಂದರೆ ಮಠದಲ್ಲಿ ಅನ್ನ ನೀಡಿ ಆಶ್ರಯ ಕೊಡುತ್ತಾರೆ. ಇಂತಹ ಮಠಗಳನ್ನು ಉಳಿಸಿ ಬೆಳೆಸಬೇಕು. ಎಲ್ಲೇ ಇದ್ದರೂ ನಮ್ಮತನ, ಸಂಸ್ಕೃತಿ, ಧರ್ಮ, ಹೆತ್ತವರನ್ನು ಮರೆಯಬಾರದು. ಜಗತ್ತನ್ನು ಸುಧಾರಿಸುವ ಕೆಲಸ ಮಾತೃ ಸ್ವರೂಪಿ ಮಾತೆಯರದು. ರಾಷ್ಟ್ರ ಮತ್ತು ದೇಶದ ಒಳಿತಿಗಾಗಿ, ರೈತರ ಹಿತಕ್ಕಾಗಿ ಪಾರಂಪರಿಕವಾಗಿ ಹಲವಾರು ವರ್ಷಗಳಿಂದ ಚಂದ್ರವನ ಆಶ್ರಮದಲ್ಲಿ ನವರಾತ್ರಿ ಸಂದರ್ಭದಲ್ಲಿ ಉಪವಾಸ ಮತ್ತು ಮೌನಾನುಷ್ಠಾನವನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜನಗಳು ಮಠಗಳಿಗೆ ಬರಬೇಕು, ಸಹಕಾರ ನೀಡಿ ಸಹಾಯ ಮಾಡಬೇಕು. ಯಾವ ದೇವರೂ ಜಾತಿ, ಮೇಲೂ, ಕೀಳೆಂದು ಬರೆದಿಲ್ಲ. ಮನುಷ್ಯ ಜಾತಿ, ಧರ್ಮ ಎಂದು ಮಾಡಿಕೊಂಡು ಹೊಡೆದಾಡುತ್ತಿದ್ದಾನೆ. ಎಲ್ಲಿ ಹುಟ್ಟಿ, ಬೆಳೆದರೆಂದು ಅಲ್ಲ, ಎಂಥ ಸಂಸ್ಕೃತಿಯನ್ನು ಪಡೆದುಕೊಂಡರೆಂಬ ಅರ್ಥ ಬರುತ್ತದೆ. ಮಕ್ಕಳಿಗೆ ಸಂಸ್ಕೃತಿ, ಧರ್ಮದ ಬಗ್ಗೆ ಕಲಿಸಿ ಮಠ, ಮಾನ್ಯಗಳ ಬಗ್ಗೆ ಅರಿವನ್ನು ಉಂಟು ಮಾಡಬೇಕೆಂದು ತಿಳಿಸಿದರು.

ಬಿಜೆಪಿ ಯುವ ಮುಖಂಡ ಎಸ್.ಸಚ್ಚಿದಾನಂದ ಮಾತನಾಡಿ, ಶ್ರೀಮಠದ ಎಲ್ಲ ಧರ್ಮಕಾರ್ಯಗಳಿಗೆ ಸದಾ ತಮ್ಮ ಸಹಕಾರವಿದೆ ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಚಲನಚಿತ್ರ ನಟ ಸಚಿನ್ ಚಲುವರಾಯಸ್ವಾಮಿ, ಓಂಶ್ರೀನಿಕೇತನ ಟ್ರಸ್ಟ್‌ನ ಮುಖ್ಯಸ್ಥ ಡಾ.ಎಂ.ಪುಟ್ಟೇಗೌಡ, ಜಿಲ್ಲೆಯ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಎಸ್.ಆನಂದ್, ಆಶ್ರಮದ ನಿರ್ದೇಶಕ ಎನ್.ಎಸ್.ಮಹದೇವಪ್ರಸಾದ್, ಬಿಜೆಪಿ ಮಂಡಲ ಅಧ್ಯಕ್ಷ ಪೀಹಳ್ಳಿ ರಮೇಶ, ಟಿ.ಶ್ರೀಧರ್, ಮಠದ ಆಡಳಿತಾಧಿಕಾರಿ ಚಿಕ್ಕತಿಮ್ಮಯ್ಯ, ಕಾರ್ಯದರ್ಶಿ ಟಿ.ಪಿ.ಶಿವಕುಮಾರ್, ವೆಂಕಟೇಶಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net