ಜಾನಪದ ಸಂಸ್ಕೃತಿ ಶ್ರೀಮಂತಗೊಳಿಸುವ ಕೆಲಸವಾಗಲಿ

01 yelandur 02
ಯಳಂದೂರು ತಾಲೂಕಿನ ಕಂದಹಳ್ಳಿ ಮಹದೇಶ್ವರ ದೇಗುಲದ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರತಿಧ್ವನಿ ಸಾಂಸ್ಕೃತಿಕ ಕಲಾ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಾನಪದ ಝೇಂಕಾರ ಕಾರ್ಯಕ್ರಮದಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿದರು. ಶ್ರೀ ಬಸವರಾಜಸ್ವಾಮಿ ಒಡೆಯರ್, ನಂಜುಂಡಯ್ಯ, ನಂಜುಂಡಸ್ವಾಮಿ, ಮಹದೇವಸ್ವಾಮಿ, ಜೆ.ಶ್ರೀನಿವಾಸ, ಅಂಬಳೆ ಜೈಗುರು ಇತರರಿದ್ದರು.
Published on

ಯಳಂದೂರು: ಜಿಲ್ಲೆಯಲ್ಲಿ ಸಮೃದ್ಧವಾಗಿರುವ ಜಾನಪದ ಸಂಸ್ಕೃತಿಯನ್ನು ಮತ್ತಷ್ಟು ಶ್ರೀಮಂತಗೊಳಿಸುವ ಕೆಲಸವನ್ನು ನಾವೆಲ್ಲರೂ ಸೇರಿ ಮಾಡಬೇಕಿದೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಕರೆ ನೀಡಿದರು.

ತಾಲೂಕಿನ ಕಂದಹಳ್ಳಿ ಮಹದೇಶ್ವರ ದೇಗುಲದ ಆವರಣದಲ್ಲಿ ಇತ್ತೀಚೆಗೆ ಪ್ರತಿಧ್ವನಿ ಸಾಂಸ್ಕೃತಿಕ ಕಲಾ ವೇದಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಜಾನಪದ ಝೇಂಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಮ್ಮ ಜಾನಪದ ಸಂಸ್ಕೃತಿ ವಿಶ್ವದ ಶ್ರೀಮಂತ ಸಂಸ್ಕೃತಿಯಲ್ಲಿ ಒಂದಾಗಿದೆ. ಇಲ್ಲಿನ ಶ್ರೀ ಮಲೆಮಹದೇಶ್ವರ, ಶ್ರೀ ಬಿಳಿಗಿರಿರಂಗನನಾಥಸ್ವಾಮಿ, ಶ್ರೀ ಮಂಟೇಸ್ವಾಮಿ, ಶ್ರೀ ಸಿದ್ದಪ್ಪಾಜಿ ದೇವರುಗಳನ್ನು ಜಾನಪದರು ಶ್ರೀಮಂತಗೊಳಿಸಿದ್ದಾರೆ. ಇಂದಿನ ದಿನಮಾನಗಳಲ್ಲಿ ಇದನ್ನು ಮುಂದಿನ ಪೀಳಿಗೆಗೆ ಜೋಪಾನ ಮಾಡುವ ಕೆಲಸವನ್ನು ಎಲ್ಲರೂ ಮಾಡಬೇಕಿದೆ. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳ ಆಯೋಜನೆಗಳು ಮತ್ತಷ್ಟು ಹೆಚ್ಚಬೇಕಿದೆ. ಇದರೊಂದಿಗೆ ಇಲ್ಲಿನ ತಂಬೂರಿ, ಕಂಸಾಳೆ, ವೀರಗಾಸೆ, ವಿವಿಧ ನೃತ್ಯ ಪ್ರಕಾರಗಳನ್ನು ಕಲಿಸುವ ಹೊಣೆಯನ್ನು ಇದನ್ನು ಕಲಿತಿರುವ ಇಂದಿನ ತಲೆಮಾರಿನ ಪೀಳಿಗೆ ಮಾಡಬೇಕಿದೆ ಎಂದರು.

ಕಾರಾಪುರ ವಿರಕ್ತಮಠದ ಶ್ರೀ ಬಸವರಾಜಸ್ವಾಮಿ ಒಡೆಯರ್ ಮಾತನಾಡಿ, ಇಡೀ ಜಿಲ್ಲೆಯಲ್ಲೇ ನಮ್ಮ ತಾಲೂಕು ಸಾಹಿತ್ಯ ಶ್ರೀಮಂತಿಕೆಯನ್ನು ಹೊಂದಿದೆ. ಇಲ್ಲಿನ ಷಡಕ್ಷರ ದೇವ, ಮುಪ್ಪಿನ ಷಡಕ್ಷರಿ, ಸಂಚಿ ಹೊನ್ನಮ್ಮ, ನಾಟಕಕಾರ ಸಂಸ, ಅಗರಂ ರಂಗಯ್ಯ, ವೈಎನ್‌ಕೆ ಸೇರಿದಂತೆ ಅನೇಕ ಮಹಾನ್ ಸಾಹಿತಿಗಳು ಈ ಮಣ್ಣಿನ ಸೊಗಡಿನಿಂದಲೇ ಹುಟ್ಟಿದವರು ಎಂಬುದು ನಮ್ಮ ಹೆಮ್ಮೆಯಾಗಿದೆ. ಇಂತಹ ಸಾಹಿತ್ಯಿಕ ಹಾಗೂ ಬಳೇಮಂಟಪದಂತಹ ಕಲಾ ಶ್ರೀಮಂತಿಕೆಯನ್ನು ಹೊಂದಿರುವ ತಾಲೂಕಿನಲ್ಲಿ ಜಾನಪದ ಝೇಂಕಾರದಂತಹ ಕಾರ್ಯಕ್ರಮಗಳು ನಡೆಯುತ್ತಿರುವುದು ಹೆಚ್ಚು ಅರ್ಥಪೂರ್ಣವಾಗಿದೆ. ಪ್ರತಿಯೊಂದು ಸಾಹಿತ್ಯಕ್ಕೂ ಮೂಲ ಬೇರು ಜಾನಪದವಾಗಿದೆ. ಜಾನಪದ ದೇವರಾಗಿರುವ ಶ್ರೀ ಮಲೆಮಹದೇಶ್ವರರು ತಂಗಿದ್ದ ಸ್ಥಳವಿರುವ ಕಂದಹಳ್ಳಿ ಮಹದೇಶ್ವರ ದೇಗುಲದ ಮುಂಭಾಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಪ್ರತಿಧ್ವನಿ ಕಲಾ ವೇದಿಕೆಯ ಸದಸ್ಯರು ಇಲ್ಲಿ ಕಾರ್ಯಕ್ರಮ ಮಾಡುತ್ತಿರುವುದು ಹೆಚ್ಚು ಅರ್ಥಪೂರ್ಣವಾಗಿದೆ ಎಂದರು.

ಕೆಪಿಎಸ್ ಶಾಲೆಯ ಉಪ ಪ್ರಾಂಶುಪಾಲ ನಂಜುಂಡಯ್ಯ ಮುಖ್ಯ ಭಾಷಣ ಮಾಡಿದರು. ಅಂಬಳೆ ಗ್ರಾಪಂ ಅಧ್ಯಕ್ಷ ನಂಜುಂಡಸ್ವಾಮಿ ಸದಸ್ಯರಾದ ಸಿದ್ದರಾಜು, ಮಹದೇವಸ್ವಾಮಿ ಪಪಂ ಮಾಜಿ ಸದಸ್ಯ ಜೆ.ಶ್ರೀನಿವಾಸ್, ಪ್ರತಿಧ್ವನಿ ಸಾಂಸ್ಕೃತಿಕ ಕಲಾ ವೇದಿಕೆಯ ಅಂಬಳೆ ಜೈಗುರು ಸೇರಿದಂತೆ ಅನೇಕರು ಇದ್ದರು.

ವಿವಿಧ ಕಲಾತಂಡಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಭಾಗವಹಿಸಿದ್ದ ಕಲಾತಂಡಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net