

ಕೊಳ್ಳೇಗಾಲ: ವಿಶ್ವಕರ್ಮ ಕಾಯಕದ ಸೂಚಕ. ಇವರು ಸಕಲ ಧರ್ಮಗಳನ್ನೂ ಆಚರಿಸಬಲ್ಲವರಾಗಿದ್ದಾರೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಹೇಳಿದರು.
ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಮಂಗಳವಾರ ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಜಯಂತಿಗೆ ಚಾಲನೆ ನೀಡಿ ಮಾತನಾಡಿದರು.
ವಿಶ್ವಕರ್ಮ ಎಂದರೆ ಸಾಧಿಸುವುದು ಎಂದರ್ಥ. ಋಗ್ವೇದದ ಪ್ರಕಾರ ಸೃಷ್ಟಿ ದೇವತೆ ಅಮೃತರೂಪ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಾಮಾಜಿಕ ನೆಲೆಗಟ್ಟಿನ ಆಧಾರದ ಮೇಲೆ ಅನೇಕ ಸಮುದಾಯಗಳ ಮಹಾಪುರುಷರ ಜಯಂತಿ ಕಾರ್ಯಕ್ರಮವನ್ನು ಆಚರಣೆ ಮಾಡುತ್ತಿದೆ. ಅವರ ವಿಚಾರಧಾರೆಗಳನ್ನು ತಿಳಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುಲ ಕಸುಬಿಗಳಿಗೆ ಪೂರಕವಾಗಿ ವಿಶ್ವಕರ್ಮ ಅಭಿವೃದ್ಧಿ ನಿಗಮ ಸ್ಥಾಪಿಸಿ ಆರ್ಥಿಕ ನೆರವು ನೀಡಿದ್ದರು. ಇತ್ತೀಚೆಗೆ ಕೇಂದ್ರ ಸರ್ಕಾರ 13 ರಿಂದ 15 ಸಾವಿರ ಕೋಟಿ ರೂ. ಅನುದಾನ ಮೀಸಲಿಡುವ ಮೂಲಕ ಕುಲಕಸುಬು ಮಾಡುವ ಸುಮಾರು 30 ಲಕ್ಷ ಜನರಿಗೆ ನೆರವಾಗುತ್ತಿದೆ ಎಂದರು.
ಶೈಕ್ಷಣಿಕವಾಗಿ ಶಿಕ್ಷತರಾದರೆ ಆರ್ಥಿಕವಾಗಿ ಸ್ವಾವಲಂಬಿ ಜೀವನ ನಡೆಸಲು ಸಾಧ್ಯ. ಆದ್ದರಿಂದ ಕುಲ ಕಸುಬಿನ ಜತೆಯಲ್ಲೇ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಸಲಹೆ ನೀಡಿದರು.
ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ವಿಶ್ವಕರ್ಮ ಜನಾಂಗದವರು ಶಾಸಕರಿಗೆ ಮನವಿ ಪತ್ರ ನೀಡಿದರು. ನಂತರ ಶಿಕ್ಷಕ ಸಿದ್ದಪ್ಪಾಜಿ ಅವರು ವಿಶ್ವಕರ್ಮರ ಕುರಿತು ಮಾತನಾಡಿದರು. ಉಪವಿಭಾಗಾಧಿಕಾರಿ ಮಹೇಶ್, ತಹಸೀಲ್ದಾರ್ ಮಂಜುಳಾ, ತಾಲೂಕು ಪಂಚಾಯಿತಿ ಇಒ ಶ್ರೀನಿವಾಸ್, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ, ವಿಶ್ವಕರ್ಮ ಜನಾಂಗದ ಅಧ್ಯಕ್ಷ ರವಿ ಹಾಗೂ ತಾಲೂಕು ಮಟ್ಟದ ಅಧಿ ಕಾರಿಗಳು, ಮುಖಂಡರು ಇದ್ದರು.