ಸಂಸ್ಕೃತಿ ಬೆಳೆಸುವ ಕಾರ್ಯವಾಗಲಿ

Let it be a work of cultivating culture.
Let it be a work of cultivating culture.
Published on

ಜಮಖಂಡಿ: ವಿಶ್ವ ವಿದ್ಯಾಲಯಗಳು ಜಾತಿ ಧರ್ಮ ರಾಜಕೀಯದಿಂದ ದೂರ ಇರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬತಿಮ್ಮಾಪೂರ ಹೇಳಿದರು.

ನಗರದ ಬಾಗಲಕೋಟ ವಿಶ್ವವಿದ್ಯಾಲಯದಲ್ಲಿ ಸೋಮವಾರ ನಡೆದ ವಿವಿಯ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ಮಾನಸಿಕ ಸಾಮರ್ಥ್ಯ ಬೆಳೆಸುವ ನಿಟ್ಟಿನಲ್ಲಿ ವಿವಿಗಳು ಕಾರ್ಯನಿರ್ವಹಿಸಬೇಕು. ದುಶ್ಚಟಕ್ಕೆ ಬಲಿಯಾಗುತ್ತಿರುವ ಯುವ ಸಮೂಹಕ್ಕೆ ಸೂಕ್ತ ಮಾರ್ಗದರ್ಶನ ಅವಶ್ಯವಾಗಿದ್ದು, ಪಾಲಕರು ಹಾಗೂ ಶಿಕ್ಷಕರು ಮಕ್ಕಳಲ್ಲಿ ಸಂಸ್ಕಾರ ಸಂಸ್ಕೃತಿ ಬೆಳೆಸುವ ಕಾರ್ಯ ಮಾಡುವುದು ಅತ್ಯವಶ್ಯಕವಾಗಿದೆ ಎಂದರು.

ಶಾಸಕ ನಾಡೋಜ ಜಗದೀಶ ಗುಡಗುಂಟಿ ಮಾತನಾಡಿ, ಬಾಗಲಕೋಟೆ ವಿಶ್ವವಿದ್ಯಾಲಯಕ್ಕೆ 600 ಎಕರೆ ಜಮಿನು ಅವಶ್ಯಕವಾಗಿದೆ. ಅದರಲ್ಲಿ 300 ಎಕರೆಯನ್ನಾದರೂ ಸರ್ಕಾರ ನೀಡಬೇಕು. ಅಲ್ಲಿಯವರೆಗೆ ಪರಿಶೀಲನೆ ಹಂತದಲ್ಲಿರುವ 39 ಎಕರೆ ಜಾಗವನ್ನು ತಕ್ಷಣ ವಿವಿಗೆ ಹಸ್ತಾಂತರ ಮಾಡಬೇಕು. ಈಗಾಗಲೆ ವಿವಿ ವ್ಯಾಪ್ತಿಯಲ್ಲಿ ಜಿಲ್ಲೆಯ 73 ಕಾಲೇಜುಗಳಿದ್ದು, 45 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ವಿಜಯಪುರ ಜಿಲ್ಲೆಯ ಕಾಲೇಜುಗಳು ರಾಣಿ ಚನ್ನಮ್ಮ ವಿವಿ ವ್ಯಾಪ್ತಿಯಲ್ಲಿದ್ದು, ಅವುಗಳನ್ನು ಜಮಖಂಡಿ ವಿವಿ ವ್ಯಾಪ್ತಿಗೆ ತಂದರೆ ರಾಜ್ಯದಲ್ಲೆ ಅತಿದೊಡ್ಡ ವಿವಿಯಾಗುತ್ತದೆ ಎಂದರು.

ಕುಲಪತಿ ಪ್ರೊ. ಆನಂದ ಎಸ್. ದೇಶಪಾಂಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಮಖಂಡಿಗೆ ತನ್ನದೆ ಆದ ವೈಶಿಷ್ಟೃ ಸ್ಥಾನಮಾನ ಇದೆ. ಇಲ್ಲಿ ಶೇ.60ರಷ್ಟು ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶಗಳಿಂದ ಬರುವುದರಿಂದ ವಿಶ್ವವಿದ್ಯಾಲಯ ಜಮಖಂಡಿಯಲ್ಲಿರುವುದು ಅತ್ಯವಶ್ಯವಾಗಿದೆ. ವಿವಿಯಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಿದ್ದೇವೆ ಎಂದರು.

ವೇದಿಕೆಯಲ್ಲಿ ಹಾಸನ ವಿವಿ ಕುಲಪತಿ ಪ್ರೊ. ತರೀಕೆರೆ ಸಿ. ತಾರಾನಾಥ, ಹಾವೇರಿ ವಿವಿ ಕುಲಪತಿ ಪ್ರೊ. ಸುರೇಶ ಎಚ್. ಜಂಗಮಶೆಟ್ಟಿ, ಕೊಪ್ಪಳ ವಿವಿ ಕುಲಪತಿ ಪ್ರೊ. ಬಿ.ಕೆ. ರವಿ ಇದ್ದರು.

ನೇಹಾರಿಕಾ ಬಡಿಗೇರ ತಂಡದವರು ಪ್ರಾರ್ಥಿಸಿದರು. ಪ್ರಭಾರಿ ಕುಲಸಚಿವ ಪ್ರೊ.ದಯಾನಂದ ಸಾವಕಾರ ಸ್ವಾಗತಿಸಿದರು. ಚಿದಾನಂದ ಡವಳೇಶ್ವರ ಪ್ರಾಸ್ತವಿಕವಾಗಿ ಮಾತನಾಡಿದರು. ಕುಮಾರ ಗದಗಿ, ಭಾರತಿ ಕಡಕೋಳ ನಿರೂಪಿಸಿದರು. ಪ್ರಭಾರಿ ಹಣಕಾಸು ಅಧಿಕಾರಿ ಡಾ.ಮಲ್ಲಿಕಾರ್ಜುನ ಮರಡಿ ವಂದಿಸಿದರು. ಕಾರ್ಯಕ್ರಮದ ನಂತರ ಕುಲಪತಿಗಳು ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net