ದೇಶದ ಇತಿಹಾಸ ತಿಳಿಸುವ ಕೆಲಸವಾಗಲಿ

KMT KARALADINA
Published on

ಕುಮಟಾ: ದೇಶದ ನೈಜ ಇತಿಹಾಸ ಅರಿಯುವ, ಮುಂದಿನ ಪೀಳಿಗೆಗೂ ತಿಳಿಸುವ ಕೆಲಸ ಮಾಡಬೇಕಾದ ಗುರುತರ ಹೊಣೆ ನಮ್ಮೆಲ್ಲರ ಮೇಲಿದೆ. ತುರ್ತು ಪರಿಸ್ಥಿತಿಯ ಮೂಲಕ ಸರ್ವಾಧಿಕಾರ ನಡೆಸಿದ ದೌರ್ಜನ್ಯಗಳು, ಅತ್ಯಾಚಾರಗಳನ್ನು ಕರಾಳದಿನವಾಗಿ ಸ್ಮರಣೆಯಲ್ಲಿಡಬೇಕಿದೆ ಎಂದು ವಕ್ತಾರ ನಾಗರಾಜ ನಾಯಕ ಹೇಳಿದರು.

ಬಿಜೆಪಿಯ ಮಂಡಲದ ವತಿಯಿಂದ ತಾಲೂಕಿನ ಮಿರ್ಜಾನದಲ್ಲಿ ಮಹಾಶಕ್ತಿ ಕೇಂದ್ರದ ರಾಮ ಕ್ಷತ್ರಿಯ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ತುರ್ತು ಪರಿಸ್ಥಿತಿಯ ಕರಾಳ ಇತಿಹಾಸಕ್ಕೆ 50 ವರ್ಷ - ಭಾರತೀಯ ಪ್ರಜಾಪ್ರಭುತ್ವದ ಕರಾಳ ಅಧ್ಯಾಯ ಎಂಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತುರ್ತು ಪರಿಸ್ಥಿತಿಯಿಂದ ಭಾರತವನ್ನು ಉತ್ತರ ಕೋರಿಯಾದಂತಹ ಸರ್ವಾಧಿಕಾರಿ ವ್ಯವಸ್ಥೆಯೆಡೆಗೆ ಸಾಗಿಸುವ ಸಂಕೇತ ನೀಡಿತ್ತು. ಏಕೆಂದರೆ ಸಂವಿಧಾನದಲ್ಲಿ ತಿದ್ದುಪಡಿ ತಂದು ಇಂದಿರಾ ಇಚ್ಛೆಯಂತೆ ರಾಷ್ಟ್ರಪತಿಗಳ ಮೂಲಕ ಜಾರಿಯಾಗಿದ್ದ ತುರ್ತು ಪರಿಸ್ಥಿತಿಯನ್ನು ಸುಪ್ರಿಂ ಕೋರ್ಟ್ ಪ್ರಶ್ನಿಸದ, ತೆರವುಗೊಳಿಸಲಾಗದ ವ್ಯವಸ್ಥೆ ತರಲು ಹೊರಟಿದ್ದರು. ಇದರ ವಿರುದ್ಧ ಹೋರಾಟದಲ್ಲಿ ಲಕ್ಷಾಂತರ ಮಂದಿ ಈ ದೇಶದ ಪ್ರಜೆಗಳ ಬಲಿದಾನವಾಯಿತು ಎಂದರು.

ಶಾಸಕ ದಿನಕರ ಶೆಟ್ಟಿ ಮಾತನಾಡಿ, ತುರ್ತಪರಿಸ್ಥಿತಿಯಂತಹ ಘೊರಕೃತ್ಯ ನೆನಪಿಸುವುದಕ್ಕೂ ನೋವು ತರುವಂಥದ್ದು, ಸಂವಿಧಾನದ ಜಪ ಮಾಡುವ ಕಾಂಗ್ರೆಸ್ ತುರ್ತು ಪರಿಸ್ಥಿತಿಯ ಬಗ್ಗೆ ವಿವರಿಸಬೇಕಿದೆ. ಅನಕ್ಷರತೆ, ಬಡತನಗಳು ಕಾಂಗ್ರೆಸ್ ನೈಜ ಇತಿಹಾಸವನ್ನು ಜನರಿಗೆ ತಿಳಿಯದಂತೆ ಮರೆಮಾಚಿದ್ದರಿಂದ ಈ ದೇಶಕ್ಕೆ, ಸಂವಿಧಾನಕ್ಕೆ ಎಷ್ಟೊಂದು ದ್ರೋಹ, ಅಪಚಾರ ಎಸಗಿದರೂ ಹಲವು ದಶಕಗಳ ಕಾಲ ಕಾಂಗ್ರೆಸ್ ಆಡಳಿತ ನಡೆಸುತ್ತಲೇ ಇರುವಂತಾಗಿತ್ತು. ಇಂಥ ಧೋರಣೆಗಳಿಂದ ದೇಶವನ್ನು ರಕ್ಷಿಸಬೇಕಿದೆ ಎಂದರು.

ಮಂಡಲಾಧ್ಯಕ್ಷ ಜಿ.ಐ. ಹೆಗಡೆ ಮಾತನಾಡಿ, ಇಂದಿರಾ ಗಾಂಧಿಯವರ ಅಧಿಕಾರ ಲಾಲಸೆಗೆ ಇಡೀ ದೇಶ ತೊಂದರೆ ಅನುಭವಿಸುವಂತಾದ ತುರ್ತಪರಿಸ್ಥಿತಿಯನ್ನು ಈ ದೇಶ ಮರೆಯಲಾಗದು. ರಾಜ್ಯದಲ್ಲೂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ಘಟನೆಗೆ ಪೊಲೀಸರನ್ನು, ಇನ್ನಿತರರನ್ನು ಹೊಣೆಮಾಡಿ ಬಲಿಪಶು ಮಾಡಿದ್ದು ಕೂಡಾ ಕಾಂಗ್ರೆಸ್ ಕರಾಳತೆಯ ಉದಾಹರಣೆಯಾಗಿದೆ ಎಂದರು. ಎಂ.ಜಿ. ಭಟ್, ಸುಬ್ರಾಯ ವಾಳ್ಕೆ, ಜಿ.ಎಸ್. ಗುನಗಾ, ವೆಂಕಟೇಶ ನಾಯಕ, ಪ್ರಶಾಂತ ನಾಯ್ಕ, ಗಣೇಶ ಅಂಬಿಗ, ಎಂ.ಎಂ. ಹೆಗಡೆ, ಶ್ರೀಧರ ಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net