

ಲಕ್ಷೆ್ಮೕಶ್ವರ: ಜನಪದ ಸಾಹಿತ್ಯವು ಎಲ್ಲ ಸಾಹಿತ್ಯದ ಮೂಲವಾಗಿದ್ದು ಧರ್ಮ, ಸಂಸ್ಕೃತಿ, ಆಚಾರ-ವಿಚಾರ, ಉಡುಗೆ-ತೊಡುಗೆಗಳ, ಮೌಲ್ಯಗಳ ಸಮ್ಮಿಲನವಾಗಿದೆ. ವಿದ್ಯಾರ್ಥಿಗಳು ಜನಪದ ಸಾಹಿತ್ಯ, ಸಂಸ್ಕೃತಿಯನ್ನು ಕೆದಕಿ ಹೊರತೆಗೆಯುವ, ಉಳಿಸಿ-ಬೆಳೆಸುವ ಕಾರ್ಯ ಮಾಡಬೇಕು ಎಂದು ಗುಡಗೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ನ ಕನ್ನಡ ಉಪನ್ಯಾಸಕ ಪೊ›.ವೈ.ಎಚ್. ಬೀರಣ್ಣವರ ಹೇಳಿದರು.
ಪಟ್ಟಣದ ಬಿಸಿಎನ್ ವಿದ್ಯಾಸಂಸ್ಥೆಯ ಬಿಸಿಎನ್ ವಿಜನ್ ಪ್ರಥಮ ದರ್ಜೆ ಕಾಲೇಜ್ನಲ್ಲಿ ಶನಿವಾರ ಆಯೋಜಿಸಿದ್ದ ಜಾನಪದ ಉತ್ಸವದಲ್ಲಿ ಅವರು ಉಪನ್ಯಾಸ ನೀಡಿದರು.
ಮನುಷ್ಯನ ಬದುಕಿನೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿ ತಲೆ-ತಲೆಮಾರುಗಳಿಂದ ಬಂದಿರುವ ಮೌಖಿಕ ಪರಂಪರೆಯಲ್ಲಿ ಸಂಬಂಧ ಜ್ಞಾನವೇ ಜಾನಪದವಾಗಿದೆ. ಇದು ತನ್ನದೇ ಆವರಣದಲ್ಲಿ ತಲೆಮಾರಿನಿಂದ ತಲೆಮಾರಿಗೆ ಸಾಗಿ ಬಂದಿದೆ. ಅದು ಯಾವುದೇ ವರ್ಗಕ್ಕೆ, ಜಾತಿಗೆ, ಸೀಮಿತವಾದುದಲ್ಲ ಎಂದರು.
ಇದು ಎಲ್ಲಿಯೂ ಬರೆದಿಟ್ಟ ಸಾಹಿತ್ಯವಲ್ಲ, ಬಾಯಿಂದ ಬಾಯಿಗೆ ಹೊರಬಂದ ಸಾಹಿತ್ಯವಾಗಿದ್ದು, ಇಂದು ಬಂದಿರುವ ಅನೇಕ ಕ್ಯಾಸೆಟ್ ಜಾನಪದ ಸಂಗೀತ ಅದು ಮೂಲ ಜಾನಪದವಲ್ಲ, ಅಲ್ಲದೆ, ಜಾನಪದ ಹಾಡುಗಳು ಬಹುವರ್ಷದವರೆಗೂ ನೆನಪಿನಲ್ಲಿಳಿಯುತ್ತವೆ. ಆದರೆ, ಕ್ಯಾಸೆಟ್ ಜಾನಪದ ಸಾಹಿತ್ಯ ಆರಂಭದಲ್ಲಿ ವೇಗವಾಗಿ ಪ್ರಸಿದ್ಧಿ ಪಡೆದು ನಂತರದ ದಿನಗಳಲ್ಲಿ ಜನರ ಮನದಿಂದ ದೂರವಾಗುತ್ತದೆ. ಇದು ಮೂಲ ಜಾನಪದಕ್ಕಿರುವ ಜನಪ್ರಿಯತೆಯಾಗಿದೆ ಎಂದರು. ಸರ್ಕಾರ ರಾಜ್ಯಾದ್ಯಂತ ಕಾಲೇಜ್ಗಳಲ್ಲಿ ಜಾನಪದ ಉತ್ಸವ ಮಾಡಲು ಆದೇಶಿಸಿರುವುದು ಸರ್ಕಾರಕ್ಕೆ ಜನಪದದ ಮೇಲಿರುವ ಕಾಳಜಿಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಲೋಹಿತ್ ನೆಲವಿಗಿ ಮಾತನಾಡಿ, ಜಾಣರ ಸಮೂಹ ಸೃಷ್ಟಿಸಿದ ಅನುಭವಿಕ ಅದ್ಭುತ ಸಾಹಿತ್ಯವೇ ಜಾನಪದವಾಗಿದೆ ಎಂದರು.
ಪ್ರಾಚಾರ್ಯ ಮಂಜುನಾಥ ಬಂಡಿವಾಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಆಡಳಿತಾಧಿಕಾರಿ ನಾಗರಾಜ ಯಂಡಿಗೇರಿ, ಡಿ.ಎಂ. ಪೂಜಾರ, ಉಪನ್ಯಾಸಕರಾದ ಬಸವರಾಜ ಶೆಟ್ಟರ, ಗಿರೀಶ ರಡ್ಡಿ, ರಮೇಶ ಗಿಣಿ, ಖುಷಾ ಅರಳಿ, ಶಂಕರ ಬಡಿಗೇರ, ಇತರರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ಜಾನಪದ ಮಹತ್ವ ಸಾರುವ ಉದ್ದೇಶದಿಂದ ಹಲವಾರು ಸ್ಪರ್ಧೆಗಳು ನಡೆದವು.