

ಪಿರಿಯಾಪಟ್ಟಣ: ಭಾಷಾಭಿಮಾನ ಬೆಳೆಸುವಲ್ಲಿ ಕಸಾಪ ಗ್ರಾಮ ಘಟಕಗಳ ಪಾತ್ರ ಬಹು ಮುಖ್ಯವಾದದ್ದು ಎಂದು ಕನ್ನಡ ಸಾಹಿತ್ಯ ಪರಿಷತ್‌ನ ತಾಲೂಕು ಅಧ್ಯಕ್ಷ ನವೀನ್‌ಕುಮಾರ್ ಅಭಿಪ್ರಾಯಪಟ್ಟರು.
ತಾಲೂಕಿನ ಅವರ್ತಿ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ಕನ್ನಡ ನಾಡಿಗಾಗಿ ಹೋರಾಟ ಮಾಡಿದ ಮಹನೀಯರನ್ನು ಸ್ಮರಿಸುವ ಕೆಲಸ ವಿದ್ಯಾವಂತರಲ್ಲಿ ಕಡಿಮೆಯಾಗುತ್ತಿರುವುದು ಆತಂಕದ ಸಂಗತಿ. ಇಂತಹ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ರಾಜ್ಯೋತ್ಸವ ಆಚರಣೆ ಮೂಲಕ ಕನ್ನಡಕ್ಕೆ ಸೇವೆ ಗೈದ ಮಹನೀಯರನ್ನು ಸ್ಮರಿಸುವ ಕೆಲಸವಾಗಬೇಕಿದೆ ಎಂದು ತಿಳಿಸಿದರು.
ರಂಗಭೂಮಿ ಕಲಾವಿದ ಮುರುಗೇಶ್ ಮಾತನಾಡಿ, ಇತರ ಭಾಷೆಗಳ ದಾಳಿಯಿಂದಾಗಿ ಕನ್ನಡ ಸ್ವಂತ ನೆಲದಲ್ಲಿ ಸೊರಗಿ ಹೋಗುತ್ತಿದೆ . ನೂರಾರು ಸಂಸ್ಕೃತಿಯನ್ನು ತುಂಬಿಕೊಂಡಿರುವ ರಾಜ್ಯ ಕರ್ನಾಟಕವಾಗಿದ್ದು ನೂರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆ ನಮ್ಮೆಲ್ಲರ ಹೆಮ್ಮೆ ಎಂಬುದು ಪ್ರತಿಯೊಬ್ಬರಿಗೂ ಅರಿವಿರಬೇಕು ಎಂದರು.
ರಾಜ್ಯೋತ್ಸವ ಅಂಗವಾಗಿ ಪಿರಿಯಾಪಟ್ಟಣ ರೋಟರಿ ಮಿಡ್ ಟೌನ್ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರವನ್ನು ಅಧ್ಯಕ್ಷ ರಾಜೇಗೌಡ ಉದ್ಘಾಟಿಸಿದರು.
ಕೊಡಗು ಮಾಜಿ ಕಸಾಪ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ತಂಡದವರಿಂದ ಗೀತ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ರಂಗೋಲಿ ಸ್ಪರ್ಧೆ, ಮಡಕೆ ಹೊಡೆಯುವ ಸ್ಪರ್ಧೆ ಹಾಗೂ ಹಾಸ್ಯ ಕಲಾವಿದರಿಂದ ಹರಿಕಥೆ ನಡೆಯಿತು. ಕಸಾಪ ಹೋಬಳಿ ಘಟಕದ ಅಧ್ಯಕ್ಷ ಮಹದೇವಪ್ಪ, ಗ್ರಾಮ ಘಟಕದ ಅಧ್ಯಕ್ಷ ಎ.ಬಿ.ಶೇಖರ್, ಯಜಮಾನರಾದ ಗುರುಮೂರ್ತಿ, ಮುಖಂಡರಾದ ಎ.ಎಂ.ಧರ್ಮ, ಶಿವರುದ್ರನಾಯಕ, ಎ.ವೈ.ದಿಲೀಪ್, ಮಿಲನಾ ಭರತ್, ಉಮೇಶ್ ಮತ್ತಿತರರು ಹಾಜರಿದ್ದರು.