

ಹಾಸನ: ಭಾರತೀಯ ಸಂಸ್ಕೃತಿಯಲ್ಲಿ ಹಿರಿಯ ನಾಗರಿಕರ ಸ್ಥಾನಕ್ಕೆ ಪ್ರಾಧ್ಯಾನತೆ ಇದ್ದು, ಅವರು ತಮ್ಮ ಸಂಪೂರ್ಣ ಜೀವನವನ್ನು ಕುಟುಂಬ, ಸಮಾಜ ಹಾಗೂ ದೇಶಕ್ಕಾಗಿ ಕಳೆದಿರುತ್ತಾರೆ. ಇವರು ದೊಡ್ಡ ಆಲದ ಮರದ ಬೇರುಗಳಿದ್ದಂತೆ. ಈ ಬೇರುಗಳಿಲ್ಲದೆ ಕಲ್ಪನೆ ಮಾಡಲು ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿ ಲತಾ ಕುಮಾರಿ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದಲ್ಲಿ ಶನಿವಾರ ನಗರದ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮನುಷ್ಯನ ಕಾಲಘಟ್ಟದಲ್ಲಿ ಮೂರು ಹಂತಗಳು ಬರುತ್ತವೆ. ಬಾಲ್ಯ, ಯವ್ವನ, ವೃದ್ಧಾಪ್ಯ. ಇವುಗಳಲ್ಲಿ ವೃದ್ಧಾಪ್ಯ ಕಠಿಣ ಎಂದು ಭಾವಿಸಬಾರದು. ಜೀವನದ ಒಂದು ಭಾಗವಾಗಿರುವ ಅದನ್ನು ಸಂತೋಷ ಮತ್ತು ಗೌರವಯುತವಾಗಿ ಘನತೆಯಿಂದ ಸ್ವೀಕರಿಸಿ ಜೀವನ ಮಾಡುವುದು ಕಲೆಯಾಗಿದೆ ಎಂದರು.
ಹಿಂದಿನ ದಿನಮಾನಗಳಿಗೆ ಹೋಲಿಕೆ ಮಾಡಿದರೆ ಇಂದಿನ ದಿನಗಳಲ್ಲಿ ಮನುಷ್ಯನ ಜೀವಿತಾವಧಿ ಹೆಚ್ಚಾಗಿದೆ. ಇದಕ್ಕೆ ಕಾರಣ ಆರೋಗ್ಯದಲ್ಲಿ ಸುಧಾರಣೆಯಾಗಿರುವುದು. ಆರೋಗ್ಯವೇ ಆಸ್ತಿಯಾಗಿರುವುದರಿಂದ ಹಣಕಾಸಿನ ವಿಚಾರದಲ್ಲಿ ಸ್ವತಂತ್ರವಾಗಿರಬೇಕು ಎಂದು ತಿಳಿಸಿದರು.
ವೃದ್ಧಾಪ್ಯ ಜೀವನದ ಅವಿಭಾಜ್ಯ ಅಂಗ. ನಾವು ಯಾರಿಗೂ ಭಾರವಾಗದಂತೆ ಕೊನೆಯ ಉಸಿರು ಇರುವವರೆಗೂ ಆರೋಗ್ಯ ಕಾಪಾಡಿಕೊಳ್ಳುವುದರ ಜತೆಗೆ ಕೆಲಸ ಮಾಡಿಕೊಂಡು ಶಿಸ್ತು ಬದ್ಧ ಜೀವನ ನಡೆಸಬೇಕು. ಜತೆಗೆ ಕಿರಿಯರಿಂದ ನಿರೀಕ್ಷೆ ಕಡಿಮೆ ಮಾಡಬೇಕು ಎಂದು ಸಲಹೆ ನೀಡಿದರು.
ವಯಸ್ಸು ಕೇವಲ ಒಂದು ಸಂಖ್ಯೆ. ಮನಸ್ಸಿಗೆ ಜಡ್ಡು ಹಿಡಿಯದಂತೆ ಕ್ರಿಯಾಶೀಲರಾಗಿ ಯಾರ ಮೇಲೂ ಅವಲಂಬಿತರಾಗದೆ ಆತ್ಮ ವಿಶ್ವಾಸದಿಂದ ಜೀವನ ನಡೆಸುವಂತಾಗಬೇಕು. ಹಿರಿಯರಿಲ್ಲದ ಮನೆ ಕಳಸವಿಲ್ಲದ ಮಂದಿರವಿದ್ದಂತೆ. ಹಳೆಯ ಬೇರಿನೊಂದಿಗೆ ಹೊಸ ಚಿಗುರು ಎಂಬಂತೆ ಕಿರಿಯರು ಹಿರಿಯರ ಜತೆಯಲ್ಲಿ ಜೀವನ ನಡೆಸಬೇಕು ಎಂದು ತಿಳಿಸಿದರು.
ಹಿರಿಯರು ಅನಿವಾರ್ಯ ಸಂದರ್ಭಗಳಲ್ಲಿ ವೃದ್ಧಾಶ್ರಮಗಳಲ್ಲಿ ಜೀವನ ನಡೆಸಲು ಸರ್ಕಾರ ಅವಕಾಶ ಕಲ್ಪಿಸಿದೆ. ಹಿರಿಯರು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದು, ಹಿರಿಯರಿಗೆ ಯಾವುದೇ ತೊಂದರೆಯಾದಲ್ಲಿ ಸಹಾಯವಾಣಿ ಸಂಖ್ಯೆ 14567 ಕರೆ ಮಾಡಬಹುದು. ನಾವೆಲ್ಲರೂ ನಿಮ್ಮ ರಕ್ಷಣೆಗೆ ಇದ್ದೇವೆ. ನಿಮ್ಮನ್ನು ಗೌರವಯುತವಾಗಿ ನಡೆಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಮನೆಯಲ್ಲಿ ಮಕ್ಕಳು ನಿತ್ಯ ಪಾಲಕರ ನಡವಳಿಕೆ ನೋಡುತ್ತ ಬೆಳೆಯುತ್ತಾರೆ. ಹಾಗಾಗಿ ಮನೆಗಳಲ್ಲಿ ಹಿರಿಯರನ್ನು ಪ್ರೀತಿಯಿಂದ ನೋಡಿಕೊಂಡಲ್ಲಿ ತಮ್ಮ ಮಕ್ಕಳು ಮುಂದೆ ಅದನ್ನೇ ಅನುಸರಿಸುತ್ತಾರೆ ಎಂದು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ಜಿ.ಕೆ.ದಾಕ್ಷಾಯಿಣಿ ಮಾತನಾಡಿ, ಪರಸ್ಪರ ಸಂಬಂಧವನ್ನು ಪ್ರೀತಿಯಿಂದ ಅರ್ಥ ಮಾಡಿಕೊಂಡಾಗ ಸಾರ್ಥಕ ಜೀವನ ನಡೆಸಲು ಸಾಧ್ಯವಾಗುತ್ತದೆ. ಮಾನಸಿಕವಾಗಿ ಬದಲಾವಣೆ ಮಾಡಿಕೊಂಡು ಹೊಂದಾಣಿಕೆಯಿಂದ ಇದ್ದರೆ ಲವಲವಿಕೆಯಿಂದ ಸಂಧ್ಯಾ ಕಾಲದ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಹಿರಿಯರು ನಿರೀಕ್ಷೆಗಳನ್ನು ಕಡಿಮೆ ಮಾಡಿಕೊಂಡಾಗ ಉತ್ತಮ ಜೀವನ ನಡೆಸಲು ಅನುಕೂಲವಾಗುತ್ತದೆ ಎಂದು ತಿಳಿಸಿದರಲ್ಲದೆ, ಮನುಷ್ಯ ಸಂಘ ಜೀವಿಯಾಗಿದ್ದು, ಒಂಟಿತನ ದೊಡ್ಡ ಶತ್ರು. ಇಳಿ ವಯಸ್ಸಿನಲ್ಲಿ ಪತಿ-ಪತ್ನಿ ಇಬ್ಬರಲ್ಲಿ ವಯೋಸಹಜವಾಗಿ ಒಬ್ಬರು ಮೃತಪಟ್ಟ ಸಂದರ್ಭದಲ್ಲಿ ಒಂಟಿತನ ಕಾಡುವುದು ಸಹಜ. ನೋವು, ಕಷ್ಟ ಎಲ್ಲರಿಗೂ ಇರುತ್ತದೆ. ಅದನ್ನು ನಗು ನಗುತ್ತ ಸ್ವೀಕರಿಸಿ ಉತ್ಸಾಹದಲ್ಲಿ ಜೀವನ ನಡೆಸಬೇಕು ಎಂದರು.
ಸರ್ಕಾರ ಹಿರಿಯ ನಾಗರಿಕರ ಪಾಲನೆ, ಪೋಷಣೆ ಹಾಗೂ ಸಂರಕ್ಷಣೆಗಾಗಿ ಜಾರಿಗೆ ತಂದಿರುವ ಕಾಯ್ದೆ ಬಗ್ಗೆ ವಿವರಿಸಿ ಯಾವುದೇ ತೊಂದರೆಗೆ ಸಿಲುಕಿದಾಗ ಕಾನೂನಾತ್ಮಕವಾಗಿ ಉಚಿತ ಸೇವೆಗಳನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ನೀಡಲಾಗುವುದು. ಯಾವುದೇ ಹಿಂಜರಿಕೆ ಮಾಡದೆ ಇದರ ಸದುಪಯೋಗ ಪಡೆದುಕೊಳ್ಳಿ ಎಂದು ತಿಳಿಸಿದರು.
ಹಿರಿಯರು ದೇವಸ್ಥಾನದ ಕಳಸವಿದ್ದಂತೆ. ಜತೆಗೆ ಕುಟುಂಬ ಮತ್ತು ಸಮಾಜದ ನೊಗವನ್ನೊತ್ತವರು. ಬದಲಾದ ಜೀವನ ಶೈಲಿಯಿಂದ ಹಿರಿಯರನ್ನು ಕಡೆಗಣಿಸಿ ಯುವ ಜನತೆ ಸಂಪಾದನೆಗಾಗಿ ಬೇರೆ ಕಡೆಗೆ ಹೋಗುತ್ತಿರುವುದು ಕಂಡು ಬರುತ್ತಿದೆ. ಇದರಿಂದ ಮೊಮ್ಮಕ್ಕಳೊಂದಿಗೆ ಕಾಲ ಕಳೆಯುವುದರಿಂದ ಹಿರಿಯರು ವಂಚಿತರಾಗುತ್ತಿದ್ದಾರೆ ಎಂದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಾಬು ಮಾತನಾಡಿ, ಹಿರಿಯರು ಛಲ, ಸಹನೆ, ಅಭಿಮಾನ, ಸತ್ಯನಿಷ್ಠೆಯಿಂದ ಇರುತ್ತಾರೆ. ಇವರ ಸ್ವತಂತ್ರೃವನ್ನು ಮಕ್ಕಳು ಕಿತ್ತುಕೊಳ್ಳದೆ ಪ್ರೀತಿಯಿಂದ ನೋಡಿಕೊಳ್ಳಬೇಕು. ಅಲ್ಲದೆ ಮನೆಯಲ್ಲಿಯೇ ಕೂಡಿ ಹಾಕುವ ಬದಲು ಹೊರಗೆ ಓಡಾಡಿಕೊಂಡು ಕೊನೆಯ ದಿನಗಳನ್ನು ಸಂತೋಷವಾಗಿ ಕಳೆಯಲು ಅವಕಾಶ ಕಲ್ಪಿಸಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಧರಣಿ, ಹಿರಿಯ ನಾಗರಿಕರ ಮತ್ತು ವಿಕಲಚೇತನರ ಇಲಾಖೆ ಅಧಿಕಾರಿ ಅನುಪಮಾ ಇತರರು ಇದ್ದರು. ಹಿರಿಯ ನಾಗರಿಕರಾದ ಅನಂತರಾಮು ಮತ್ತು ರಂಗಯ್ಯ ಅವರನ್ನು ಸನ್ಮಾನಿಸಲಾಯಿತು. ದಿನಾಚರಣೆ ಅಂಗವಾಗಿ ನಡೆಸಿದ್ದ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಹಿರಿಯ ನಾಗರಿಕರಿಗೆ ಬಹುಮಾನ ವಿತರಣೆ ಮಾಡಲಾಯಿತು.