ಆತ್ಮವಿಶ್ವಾಸ, ಸ್ವಾಭಿಮಾನ ತುಂಬುವ ಕೆಲಸವಾಗಲಿ

29 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಹಿಳೆಯಲ್ಲಿ ಆತ್ಮವಿಶ್ವಾಸ ಸ್ವಾಭಿಮಾನ ತುಂಬವ ಕಾರ್ಯ ಸಂಘ-ಸಂಸ್ಥೆಗಳಿಂದ ಆಗಬೇಕು. ಮಹಿಳೆ ಆರ್ಥಿಕ ಅಭಿವೃದ್ಧಿ ಹೊಂದಿದರೆ ದೇಶದ ಆರ್ಥಿಕ ಪರಿಸ್ಥಿತಿ ಪ್ರಗತಿ ಕಾಣುತ್ತದೆ ಎಂದು ಜೆಎಸ್‌ಎಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.
ನಗರದ ವಿದ್ಯಾಗಿರಿಯ ಜೆಎಸ್‌ಎಸ್ ಕಾಲೇಜಿನಲ್ಲಿ ಜನತಾ ಶಿಕ್ಷಣ ಸಮಿತಿ ಹಾಗೂ ರ‌್ಯಾಪಿಡ್ ಸಂಸ್ಥೆ ಆಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ ಮಹಿಳಾ ಉದ್ಯೋಗ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ 75ನೇ ವರ್ಷದ ಜನ್ಮದಿನ ನಿಮಿತ್ತ 75ನೇ ಕಾರ್ಯಕ್ರಮವಾಗಿ ಉದ್ಯೋಗ ಮೇಳ ಆಯೋಜಿಸಲಾಗಿದೆ. ಮಹಿಳೆ ಉದ್ಯೋಗದಾತೆಯಾಗಲಿ, ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡಲಿ. ಇಂದು ಮಹಿಳೆ ಪ್ರತಿ ಕ್ಷೇತ್ರದಲ್ಲೂ ತನ್ನ ಪಾತ್ರ ನಿರ್ವಹಿಸುತ್ತಿದ್ದಾಳೆ. ಪುರುಷನಿಗೆ ಸಮನಾಗಿ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಹೊಂದಿದ್ದಾಳೆ ಎಂದರು.
ಏಕಸ್ ಕಂಪನಿ ಮುಖ್ಯ ತಂತ್ರಜ್ಞಾನ ಅಧಿಕಾರಿ ಡಾ. ರವಿ ಗುತ್ತಲ್ ಮಾತನಾಡಿ, ಹು-ಧಾ ಕೈಗಾರಿಕಾ ಬೆಳವಣಿಗೆಯಲ್ಲಿ ಕ್ಷಿಪ್ರ ಪ್ರಗತಿ ಕಾಣುತ್ತಿದೆ. ಉದ್ಯೋಗಾವಕಾಶಗಳು ಹೇರಳವಾಗಿವೆ. ಕೌಶಲಕ್ಕೆ ತಕ್ಕ ಉದ್ಯೋಗ ಆರಿಸಿಕೊಳ್ಳಿ. ನಿಷ್ಠೆಯಿಂದ ಕಾರ್ಯನಿರ್ವಹಿಸಿ. ಈಗಾಗಲೇ ಏಕಸ್ ಕಂಪನಿ ಇಟ್ಟಿಗಟ್ಟಿ ಗ್ರಾಮದಲ್ಲಿ ತನ್ನ ಘಟಕ ಆರಂಭಿಸುತ್ತಿದ್ದು, 1200 ಜನರಿಗೆ ಉದ್ಯೋಗಾವಕಾಶವಿದೆ. ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದರು.
ಟಾಟಾ ಮೋಟರ್ಸ್ ಪ್ಲಾಂಟ್ ಮುಖ್ಯಸ್ಥ ಅಮಿತ ಸಹಾಯ, ಯುನೈಟೆಡ್ ಸೆಕ್ಯೂರಿಟಿ ಫೋರ್ಸ್ ಮುಖ್ಯಸ್ಥ ಸಂತೋಷ್ ಇಂಚಲ್ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ರ‌್ಯಾಪಿಡ್ ಕಾರ್ಯದರ್ಶಿ ವಾಣಿಶ್ರೀ ಪುರೋಹಿತ ಮಾತನಾಡಿ, ಉದ್ಯೋಗದಾತರಿಗೆ ಹಾಗೂ ಉದ್ಯೋಗ ಆಕಾಂಕ್ಷಿಗಳ ನಡುವೆ ನಾವು ಸೇತುವೆಯಾಗಿ ಕೌರ್ಯ ನಿರ್ವಹಿಸುತ್ತಿದ್ದೇವೆ. ತಮಗೆ ತಕ್ಕ ಅಭ್ಯರ್ಥಿಗಳನ್ನು ಹಾಗೂ ತಮಗೆ ಸೂಕ್ತ ಉದ್ಯೋಗ ಆಯ್ಕೆ ಮಾಡುವ ಸ್ವಾತಂತ್ರೃ ಇಬ್ಬರಿಗೂ ಇದೆ. ಹೆಚ್ಚಿನ ಉದ್ಯೋಗಾವಕಾಶ ಲಭ್ಯವಾದರೆ ಈ ಕಾರ್ಯ ಮಾಡಿದ ಸಂತೃಪ್ತಿ ನಮಗಿರುತ್ತದೆ ಎಂದರು.
ಬಿ.ಎ ತಡಕೋಡ, ಮಂಜುನಾಥ ಚಟ್ಟೇರ, ಸಿಬ್ಬಂದಿ, ಇತರರು ಇದ್ದರು. ಮಾಳವಿಕಾ ಕಡಕೋಳ ಸ್ವಾಗತಿಸಿದರು. ಮಹಾವೀರ ಉಪಾಧ್ಯೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಯಾ ರಾಮನ್ ನಿರೂಪಿಸಿದರು. ಸ್ನೇಹಾ ದೇಶಪಾಂಡೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net