ಉದ್ಯೋಗ ಸೃಷ್ಟಿಸುವ ಕಾರ್ಯವಾಗಲಿ

H15-LXR01
Published on

ಲಕ್ಷ್ಮೇಶ್ವರ: ಜಗತ್ತನ್ನು ವಿಜ್ಞಾನಿಗಳು, ವ್ಯಾಪಾರಸ್ಥರು ಹಾಗೂ ಬರಹಗಾರರು ಈ ಮೂವರೇ ನಿಯಂತ್ರಣ ಮಾಡುತ್ತಾರೆ. ಜಗತ್ತು ನಡೆಯುವುದೇ ವಿಜ್ಞಾನಿಗಳಿಂದ. ಅವರು ಕಂಡುಹಿಡಿದಿದ್ದನ್ನು ಜಗತ್ತಿಗೆ ತೋರಿಸುವವರು ವ್ಯಾಪಾರಿಗಳು. ವಿಜ್ಞಾನಿ ಕಂಡು ಹಿಡಿದಿರುವುದು ಮತ್ತು ಇಂತಹದನ್ನು ವ್ಯಾಪಾರ ಮಾಡುವ ಬಗ್ಗೆ ಜಗತ್ತಿಗೆ ಪರಿಚಯಿಸುವವರು ಬರಹಗಾರರು ಎಂದು ಚಿಂತಕ ಪ್ರೊ. ಸಿದ್ದು ಯಾಪಲಪರವಿ ಅಭಿಪ್ರಾಯಪಟ್ಟರು.

ಪಟ್ಟಣದ ಬಿಸಿಎನ್ ಪಾಲಿಟೆಕ್ನಿಕ್ ಕಾಲೇಜು ಸಭಾಭವನದಲ್ಲಿ ಬಣಜಿಗ ಕ್ಷೇಮಾಭಿವೃದ್ಧಿ ಟ್ರಸ್ಟ್ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಸಾಧಕರ ಸನ್ಮಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂದು ಜಗತ್ತು ಸಾಕಷ್ಟು ಪ್ರಮಾಣದಲ್ಲಿ ಬೆಳೆದಿದೆ. ಆದರೆ, ದೊಡ್ಡ ಪ್ರಮಾಣದಲ್ಲಿರುವ ಸಮಾಜದವರು ಇಂದು ಯಾವ ನಿಟ್ಟಿನಲ್ಲಿ ಬೆಳದಿದ್ದೇವೆ ಎನ್ನುವುದನ್ನು ಚಿಂತನೆ ಮಾಡಿಕೊಳ್ಳಬೇಕು. ವಿದೇಶಗಳಲ್ಲಿ ನಮ್ಮ ದೇಶದವರೇ ಕೋಟ್ಯಧಿಪತಿಗಳಾಗಿದ್ದಾರೆ. ಆದರೆ, ನಮ್ಮ ಮಕ್ಕಳು ಅಲ್ಪಸ್ವಲ್ಪ ಸಂಬಳಕ್ಕಾಗಿ ಬೇರೊಬ್ಬರನ್ನು ಅವಲಂಬಿಸುವಂತಾಗಿದೆ. ಇದು ಪ್ರತಿಯೊಬ್ಬರೂ ಚಿಂತನೆ ಮಾಡಬೇಕಾದ ವಿಷಯವಾಗಿದೆ. ನಾವು ಬೆಳೆಯುವುದರ ಜತೆಗೆ ಸಮಾಜದಲ್ಲಿಯೂ ಮತ್ತೊಬ್ಬರಿಗೆ ಉದ್ಯೋಗ ಸೃಷ್ಟಿ ಮಾಡುವಂತಹ ಕಾರ್ಯ ಮಾಡಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಬನ್ನಿಕೊಪ್ಪ ಜಪದಕಟ್ಟಿಮಠದ ಡಾ.ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಎಲ್ಲ ಸಮಾಜಗಳು ಶ್ರೇಷ್ಠತೆ ಹೊಂದಿವೆ. ಈ ನಿಟ್ಟಿನಲ್ಲಿ ಬಣಜಿಗ ಸಮಾಜ ವ್ಯಾಪಾರ ವೃತ್ತಿ ಅಳವಡಿಸಿಕೊಂಡಿದ್ದರೂ ಸಾಮಾಜಿಕ, ಶೈಕ್ಷಣಿಕವಾಗಿ ಸಾಕಷ್ಟು ಪ್ರಗತಿ ಕಾಣುತ್ತಿದೆ. ಬಣಜಿಗ ಸಮಾಜ ವ್ಯಾಪಾರಿ ಮನೋಭಾವ ಹೊಂದಿದ್ದರೂ ದಾನ, ಧರ್ಮದ ಕೆಲಸ ಮಾಡುತ್ತಿದೆ ಎಂದರು.

ಚಂದ್ರಶೇಖರ ಮಹಾಜನಶೆಟ್ಟರ ಪ್ರಾಸ್ತಾವಿಕವಾಗಿ ಮಾತನಾಡಿದರು. ಟ್ರಸ್ಟ್ ಅಧ್ಯಕ್ಷ ವಿಜಯಕುಮಾರ ಹತ್ತಿಕಾಳ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್​ನ ಉಪಾಧ್ಯಕ್ಷ ಲೋಹಿತ ನೆಲವಿಗಿ, ಮಹಿಳಾ ಘಟಕದ ಅಧ್ಯಕ್ಷೆ ರತ್ನಾ ರ್ಕ, ಹಿರಿಯರಾದ ನಿರ್ಮಲಾದೇವಿ ಹತ್ತಿಕಾಳ, ಬಸವರಾಜ ಬೆಂಡಿಗೇರಿ ಉಪಸ್ಥಿತರಿದ್ದರು. ನಂದಿನಿ ಮಾಳವಾಡ ಪ್ರಾರ್ಥಿಸಿದರು, ಅಕ್ಷತಾ ವಡಕಣ್ಣವರ ಸ್ವಾಗತಿಸಿದರು, ಜೆ.ಎಸ್. ರಾಮಶೆಟ್ಟರ ವಂದಿಸಿದರು, ಬಸವರಾಜ ಶೆಟ್ಟರ, ಶೋಭಾ ಗಾಂಜಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net