

ಮಡಿಕೇರಿ: ಇಸ್ರೇಲ್ ಮತ್ತು ಪ್ಯಾಲೆಸ್ತೀನಿನ ನಡುವಿನ ಅಶಾಂತಿಯ ಶಮನಕ್ಕೆ ವಿಶ್ವಶಾಂತಿಯನ್ನು ಬಯಸುವ ಭಾರತ ಮಧ್ಯ ಪ್ರವೇಶ ಮಾಡಬೇಕು. ಆ ಮೂಲಕ ಕದನ ವಿರಾಮಕ್ಕೆ ಹಾದಿ ಸುಗಮಗೊಳಿಸುವ ಮಾರ್ಗೋಪಾಯಕ್ಕೆ ಕ್ರಮಕೈಗೊಳ್ಳಬೇಕು ಎಂದು ಸುನ್ನಿ ಮಹಲ್ ಒಕ್ಕೂಟದ ಕೊಡಗು ಜಿಲ್ಲಾ ಸಮಿತಿ ಮನವಿ ಮಾಡಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ಸಮಿತಿಯ ಜಿಲ್ಲಾಧ್ಯಕ್ಷ ಸಿ.ಎಂ.ಅಬ್ದುಲ್ ಹಮೀದ್ ಮೌಲವಿ ಸುಂಟಿಕೊಪ್ಪ, ಇಸ್ರೇಲ್ ದಾಳಿಯಿಂದ ಸಾವಿರಾರು ಅಮಾಯಕ ಜೀವಗಳು ಬಲಿಯಾಗುತ್ತಿವೆ. ಅನೇಕರು ಗಾಯಾಳುಗಳಾಗಿ ನರಳುತ್ತಿದ್ದಾರೆ. ಆದ್ದರಿಂದ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಜತೆಯಲ್ಲಿ ಉತ್ತಮ ಬಾಂಧವ್ಯ ಹೊಂದಿರುವ ಭಾರತ ಸರ್ಕಾರ ಶಾಂತಿಯನ್ನು ಕಾಪಾಡಲು ಮಾರ್ಗದರ್ಶನ ಮಾಡಬೇಕೆಂದು ಮನವಿ ಮಾಡಿದ್ದಾರೆ.
ಎಲ್ಲಾ ರೀತಿಯ ದಾಳಿಗಳನ್ನು ತಕ್ಷಣ ನಿಲ್ಲಿಸಿ ಶಾಂತಿಯನ್ನು ಕಾಪಾಡಬೇಕು. ಅಮಾಯಕರ ಜೀವ ಉಳಿಸಬೇಕು. ಭಾರತ ಸರ್ಕಾರ ಮುಂದೆ ಬಂದು ಕದನ ವಿರಾಮ ಘೋಷಿಸುವಂತಹ ಕಾರ್ಯಕ್ಕೆ ಪ್ರಯತ್ನಿಸಬೇಕು. ಇಡೀ ಜಗತ್ತಿಗೇ ಮಾರಕವಾಗಿರುವ ಯುದ್ಧ ಯಾವುದಕ್ಕೂ ಪರಿಹಾರವಲ್ಲ, ಯುದ್ಧ ಮನುಕುಲದ ಮಾರಣಹೋಮಕ್ಕೆ ದಾರಿ ಮಾಡಿಕೊಡುತ್ತದೆ. ಆದ್ದರಿಂದ ಭಾರತ ಇಸ್ರೇಲ್ ನ ಮೇಲೆ ಪ್ರಭಾವ ಬೀರಿ ಕದನ ವಿರಾಮ ಘೋಷಣೆಯಾಗುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಅಮಾಯಕರನ್ನು ರಕ್ಷಿಸಲು ಭಾರತ ಸರ್ಕಾರ ಮಧ್ಯ ಪ್ರವೇಶಿಸುವುದು ಅನಿವಾರ್ಯವಾಗಿದ್ದು, ಉಭಯ ಕಡೆಯವರ ಮನವೊಲಿಸುವ ಪ್ರಯತ್ನಕ್ಕೆ ಮುಂದಾಗಬೇಕು. ಕದನ ವಿರಾಮಕ್ಕೆ ಪೂರಕ ವಾತಾವರಣವನ್ನು ಸೃಷ್ಟಿ ಮಾಡಿ ಸಮಸ್ಯೆಗಳನ್ನು ಚರ್ಚೆಯ ಮೂಲಕ ಶಾಂತಿಯುತವಾಗಿ ಬಗೆಹರಿಸಿಕೊಳ್ಳಲು ವೇದಿಕೆ ಸೃಷ್ಟಿ ಮಾಡಬೇಕು. ವಿಶ್ವಶಾಂತಿಯನ್ನು ಬಯಸುವ ಭಾರತಕ್ಕೆ ಈ ಕಾರ್ಯ ಸಾಧ್ಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.