

ಶೃಂಗೇರಿ: ಜ್ಞಾನ ಹಾಗೂ ಅನುಭವತೆ ಸಾಹಿತ್ಯದ ಪ್ರಮುಖ ಸಂಪತ್ತು. ಮನಸ್ಸಿನ ಒತ್ತಡ ಕಡಿಮೆ ಮಾಡುವ ಹಾಸ್ಯ ಬದುಕಿನ ಅವಿಭಾಜ್ಯ ಅಂಗವಾಗಿರಬೇಕು ಎಂದು ರಂಗಕಲಾವಿದ ಗುತ್ತಳಿಕೆ ಕೇಶವ್ ಹೇಳಿದರು.
ಮೆಣಸೆ ಗ್ರಾಪಂ ವ್ಯಾಪ್ತಿಯ ಶೂನ್ಯ ರಮೇಶ್ ಅವರ ಮನೆಯಂಗಳದಲ್ಲಿ ತಾಲೂಕು ಕಸಾಪದಿಂದ ಭಾನುವಾರ ಹಮ್ಮಿಕೊಂಡಿದ್ದ ನುಡಿ ನಿತ್ಯೋತ್ಸವ ಕಾರ್ಯಕ್ರಮದಲ್ಲಿ ನಿತ್ಯ ಬದುಕಿನಲ್ಲಿ ಹಾಸ್ಯ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.
ಅಧುನಿಕ ಜಗತ್ತಿನಲ್ಲಿ ಒತ್ತಡದ ಬದುಕಿನ ನಡುವೆ ಜೀವನ ಶೈಲಿಯೂ ಬದಲಾಗುತ್ತಿದೆ. ಮಾತು ಕಡಿಮೆತಯಾಗಿ ಕೆಲಸ ಹೆಚ್ಚಾಗಿ ವ್ಯಕ್ತಿ ಜೀವನದ ಸಂತಸ ಅನುಭವಿಸುವ ಆಪ್ತತೆ ದೂರವಾಗುತ್ತಿದೆ. ಹಿರಿಯರು ನೀಡಿ ಹೋದ ಜಾನಪದದ ಅನುಭವಗಳು, ಹಬ್ಬ ಹರಿದಿನಗಳ ಆಚರಣೆಗಳು ಮಾಯವಾಗುತ್ತಿದೆ. ಬದುಕಿನ ಪ್ರತಿಕ್ಷಣ ನಮ್ಮ ಜೀವನದಲ್ಲಿ ಹಾಸ್ಯ ಘಟನೆಗಳು ನಡೆಯುತ್ತಿದ್ದರೂ ಅದನ್ನು ಅಸ್ವಾದಿಸುವ ಸಮ ಮನಸ್ಸುಗಳು ಮರೆಯಾಗುತ್ತಿದ್ದು ಜೀವನದ ಸರಳತೆಯನ್ನು ನಾವು ಕಳೆದುಕೊಳ್ಳುತ್ತಿದೆ ಎಂದರು.
ತಾಲೂಕು ಕಸಾಪ ಸಂಚಾಲಕ ರಮೇಶ್ ಶೂನ್ಯ ಮಾತನಾಡಿ, ಸಾಹಿತ್ಯ ನಮ್ಮಲ್ಲಿ ಚಿಂತನೆ ಹಾಗೂ ವಿವೇಚನೆಯ ಜ್ಞಾನ ವೃದ್ಧಿಸಲು ಕಾರಣವಾಗುತ್ತದೆ.ಪರಸ್ಪರ ವಿಶ್ವಾಸ. ಸಮನ್ವಯತೆ ಬೆಳೆಯಲು ಸಾಹಿತ್ಯ ಪ್ರಮುಖ ಕಾರಣ. ಸಾಹಿತ್ಯದಿಂದ ಮನಸ್ಸುಗಳ ನಡುವೆ ಭಾವಾನಾತ್ಮಕ ಸಂಬಂಧಗಳು ಚಿಗುರುತ್ತದೆ ಎಂದರು.
ತಾಲೂಕು ಕಸಾಪ ಸಂಚಾಲಕ ರಮೇಶ್, ಸಾಹಿತಿಗಳಾದ ಬಿ.ಶಿವಶಂಕರ್,ಆಗುಂಬೆ ಗಣೇಶ್ ಹೆಗಡೆ, ಪತ್ರಕರ್ತೆ ಶೋಭಾ ಅನಂತಯ್ಯ, ಕೃಷಿ ಸಾಧಕರಾದ ಅನಘ, ಆದ್ಯ ಅವರನ್ನು ಗೌರವಿಸಲಾಯಿತು.
ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ಸುಬ್ರಹ್ಮಣ್ಯ, ಮಹಿಳಾ ಘಟಕ ಅಧ್ಯಕ್ಷೆ ಸುಮಂಗಲಿ ಅನಂದ ಸ್ವಾಮಿ, ಪ್ರಧಾನ ಕಾರ್ಯದರ್ಶಿ ಹೆಗ್ಗದ್ದೆ ಶಿವಾನಂದರಾವ್,ಮೆಣಸೆ ಗ್ರಾಪಂ ಸದಸ್ಯರಾದ ಸವಿತಾ, ರಾಜುಶೂನ್ಯ, ಹೋಬಳಿ ಘಟಕದ ಅಧ್ಯಕ್ಷ ದಿನೇಶ್ ಅಂಗುರ್ಡಿ, ಅನಂದಸ್ವಾಮಿ ಇದ್ದರು.