

ದೊಡ್ಡಬಳ್ಳಾಪುರ: ಇಂದಿಗೂ ಸಮಾಜದ ನ್ಯೂನತೆಗಳನ್ನು ಸರಿಪಡಿಸುವುದು ಸುಲಭದ ಕೆಲಸವಲ್ಲ. ಆದರೆ, ಬಸವಣ್ಣ 800 ವರ್ಷಗಳ ಹಿಂದೆ ಈ ರೋಗಗ್ರಸ್ತ ಸಮಾಜಕ್ಕೆ ಚಿಕಿತ್ಸೆ ನೀಡಿದ ಮಹಾನ್ ಮಾನವತಾವಾದಿ ಎಂದು ಶಾಸಕ ಧೀರಜ್ ಮುನಿರಾಜು ಹೇಳಿದರು.
ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಹಮ್ಮಿಕೊಂಡಿದ್ದ ಬಸವಣ್ಣ ಜಯಂತಿಯಲ್ಲಿ ಮಾತನಾಡಿದ ಅವರು, ಬಸವಣ್ಣನವರು ಜಾತಿ, ಧರ್ಮ, ದೇಶಕ್ಕಿಂತ ಮನುಷ್ಯತ್ವ ಮುಖ್ಯವಾಗಬೇಕು. ಸ್ವಾರ್ಥ ಮನೋಭಾವನೆ ಬಿಡಬೇಕು ಎಂದು ಬಯಸಿದವರು. ಸಮಾಜವನ್ನು ಸರಿಪಡಿಸಬೇಕಾದರೆ ನಾವು ಮಹಾ ಪುರುಷರ ಜೀವನ ಮತ್ತು ಸಂದೇಶವನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕು ಎಂದರು.
ಕಾಯಕವೇ ಕೈಲಾಸ ಎಂದ ಬಸವಣ್ಣನವರ ಆಶಯಗಳು ಈಡೇರಬೇಕಾದರೆ ಕಾರ್ಯಾಂಗ ಮತ್ತು ಶಾಸಕಾಂಗ ಬಡವರ ಪರವಾಗಿರಬೇಕು, ನಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ಮಾಡಬೇಕು. ಪ್ರತಿಯೊಬ್ಬರಿಗೂ ಕೆಲಸ ಸಿಗಬೇಕು, ಪ್ರತಿಯೊಬ್ಬರೂ ದುಡಿದು ತಿನ್ನುವ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದು ಕರೆ ಕೊಟ್ಟರು.
ಕನ್ನಡ ಪಕ್ಷದ ರಾಜ್ಯ ಮುಖಂಡ ಸಂಜೀವನಾಯ್ಕ್ ಮಾತನಾಡಿ, ಪಹಲ್ಗಾಮ್ನ ಭಯೋತ್ಪಾದನಾ ದಾಳಿಯಿಂದ ಇಡೀ ದೇಶ ಶೋಕಾಚರಣೆಯಲ್ಲಿ ಮುಳುಗಿದೆ. ಇಂತಹ ಅತಿರೇಖಗಳು ನಡೆಯದಂತೆ ತಡೆಯಲು ಬುದ್ಧ, ಬಸವ ಗಾಂಧಿ ಮತ್ತು ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಪಾಲಿಸಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯೆ ಪ್ರಮೀಳಾ ಮಹಾದೇವ್ ಮಾತನಾಡಿ ಬಸವಣ್ಣ ಅವರು ಹೊಸ ಕ್ರಾಂತಿಯನ್ನು ಹುಟ್ಟು ಹಾಕಿದರು. ಜನ ಸಾಮಾನ್ಯರು ಜಾತಿಗಳನ್ನು ಮೀರುವ ಸಲುವಾಗಿ ಪಟ್ಟ ಭದ್ರರರ ವಿರೋಧವನ್ನು ಎದುರಿಸಿ ಲಿಂಗಾಯತ ಧರ್ಮವನ್ನು ಕಟ್ಟಿದವರು ಬಸವಣ್ಣ, ಲಿಂಗಾಯತರು ಜಾತಿ ಎಂದರೆ ಅದು ಬಸವಣ್ಣ ಅವರ ಆಶಯಗಳಿಗೆ ಬಗೆದ ದ್ರೋಹವಾಗುತ್ತದೆ ಎಂದರು.
ಕರವೇ ಕನ್ನಡಿಗರ ಬಣದ ಅಧ್ಯಕ್ಷ ಬಿ.ಎಸ್.ಚಂದ್ರಶೇಖರ್, ಮುಖಂಡ ಲೋಕೇಶ್ ನಾಗಸಂದ್ರ, ರೇವತಿ ಅನಂತರಾಮ್, ಛಲವಾದಿ ಮಹಾಸಭಾ ತಾಲೂಕು ಅಧ್ಯಕ್ಷ ಗುರುರಾಜಪ್ಪ ಇದ್ದರು.