

ಮುಂಡರಗಿ: ಮಧ್ಯಾಹ್ನದ ಬಿಸಿಯೂಟ ಜವಾಬ್ದಾರಿಯನ್ನು ಮುಖ್ಯಶಿಕ್ಷಕ(ಎಚ್‌ಎಂ)ರಿಂದ ಮುಕ್ತಗೊಳಿಸಿ ಖಾಸಗಿ ಸಂಸ್ಥೆ ಅಥವಾ ಎನ್‌ಜಿಒಗಳಿಗೆ ವಹಿಸಬೇಕು ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದಿಂದ ಬಿಇಒ ಎಚ್.ಎಂ. ಫಡ್ನೇಶಿ ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.
ತಾಲೂಕಿನಲ್ಲಿ ಸುಮಾರು 22 ವರ್ಷಗಳಿಂದ ಮಧ್ಯಾಹ್ನದ ಬಿಸಿಯೂಟ ವ್ಯವಸ್ಥೆಯನ್ನು ಎಲ್ಲ ತರಹದ ಭಾರ ಹೊತ್ತುಕೊಂಡು ನಡೆಸುತ್ತ ಬಂದಿದ್ದು, ಇದರಿಂದ ಮಾನಸಿಕ ಒತ್ತಡ, ಹಿಂಸೆ ಅನುಭವಿಸಿ ಸಾಕಷ್ಟು ಮುಖ್ಯಶಿಕ್ಷಕರು ಸಾವಿನ ದವಡೆಗೆ ಹೋದ ಉದಾಹರಣೆಗಳಿವೆ. ಎಲ್ಲ ಘಟನೆಗಳನ್ನು ಆಧರಿಸಿ ಈಗಾಗಲೆ ಸಾಕಷ್ಟು ಬಾರಿ ಇಲಾಖೆಯ ಮೇಲಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಬಿಸಿಯೂಟದ ಕಾರ್ಯದಿಂದ ಮುಖ್ಯಶಿಕ್ಷಕರನ್ನು ಮುಕ್ತಿಗೊಳಿಸಲು ಮನವಿ ಸಲ್ಲಿಸಿದ್ದರೂ ಇಲಾಖೆ ಇಲ್ಲಿಯವರೆಗೆ ಯಾವುದೇ ಪರಿಹಾರ ಕ್ರಮ ಕೈಗೊಂಡಿಲ್ಲ. ಇಲಾಖೆಯ ಎಲ್ಲ ಆದೇಶಗಳಿಗೆ ಅನುಗುಣವಾಗಿ ಮುಖ್ಯಶಿಕ್ಷಕರು ಬಿಸಿಯೂಟ ವ್ಯವಸ್ಥೆ ನಿರ್ವಹಿಸುತ್ತಿದ್ದಾರೆ.
ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವಲ್ಲಿ, ಶಾಲಾ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಹಾಗೂ ಮುಖ್ಯಶಿಕ್ಷಕರ ಕಾರ್ಯನಿರ್ವಹಣೆಯ ಮೇಲೆ ಋಣಾತ್ಮಕ ಪರಿಣಾಮ ಉಂಟಾಗುತ್ತದೆ. ಮುಖ್ಯಶಿಕ್ಷಕರು ಕೆಲಸದ ಒತ್ತಡ ಮಧ್ಯೆಯು ಇಲಾಖೆ ನಿಗದಿಪಡಿಸಿದ ಶೈಕ್ಷಣಿಕ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುತ್ತಿದ್ದಾರೆ. ಆದರೆ, ಮಕ್ಕಳ ಕಲಿಕೆಯಲ್ಲಿ ನಿರೀಕ್ಷಿತ ಫಲಿತಾಂಶ ಪಡೆಯುವಲ್ಲಿ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಬಿಸಿಯೂಟದ ಕಾರ್ಯದಿಂದ ಮುಖ್ಯಶಿಕ್ಷಕರನ್ನು ಮುಕ್ತಗೊಳಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಸಂಘದ ತಾಲೂಕಾಧ್ಯಕ್ಷ ಶಿವಕುಮಾರ ಸಜ್ಜನರ, ಎಚ್.ಜೆ. ಪವಾರ, ವಿಶ್ವನಾಥ ಉಳ್ಳಾಗಡ್ಡಿ, ಮಹಾಂತೇಶ ಕೊನೇರಿ, ಎ.ಡಿ. ಬಂಡಿ, ಎಸ್.ವಿ. ಅರಿಷಿಣದ, ಎಂ.ಪಿ. ಶೀರನಹಳ್ಳಿ, ಎಚ್.ಎಚ್. ಸದರಬಾಯಿ, ಮಹಾಂತೇಶ ಹಲವಾಗಲಿ, ಕೆ. ಕೊಟ್ಟೂರಯ್ಯ, ವಿ.ಎಸ್.ಪಾಟೀಲ, ಎಂ.ಡಿ. ಪವಾರ, ಎಸ್.ಎಚ್. ಇಟಗಿ, ಸಂಗಮೇಶ ನಿಡಗುಂದಿ, ಎಂ.ಎಸ್. ಪಾಟೀಲ, ಬಿ.ಎಂ. ಹಡಪದ, ಪಿ.ಡಿ.ಹಿರೇಮಠ, ಎನ್.ಎಸ್. ಶೀರನಹಳ್ಳಿ, ಸಿದ್ದಣ್ಣ ಹೊಸಮನಿ, ವೈ.ಎಚ್.ರಜಪೂತ ಇತರರಿದ್ದರು.