

ಹೊನ್ನಾವರ: ದೇಶ ನಿರಂತರವಾಗಿ ಆಕ್ರಮಣಕ್ಕೆ ಒಳಗಾಗಿರುವ ಕಾರಣವನ್ನು ಇವತ್ತಿಗೂ ಎದುರಿಸಿ ನಿಲ್ಲಲು ಸಾಧ್ಯವಾಗದ ಹೀನ ಸ್ಥಿತಿಯಲ್ಲಿ ನಾವಿದ್ದೇವೆ. ನಮ್ಮ ಶ್ರದ್ಧಾ ಕೇಂದ್ರದ ಮೇಲೆ ನಡೆಯುವ ದಬ್ಬಾಳಿಕೆಯನ್ನು ದಮನ ಮಾಡಲು ಎಲ್ಲರೂ ಒಂದಾಗಿರಬೇಕು ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಪಟ್ಟಣದ ನಾಮಧಾರಿ ಸಭಾಭವನದ ಆವರಣದಲ್ಲಿ ಧರ್ಮಸ್ಥಳ ಕ್ಷೇತ್ರದ ವಿರುದ್ಧ ಅಪಪ್ರಚಾರ ಹಬ್ಬಿಸುತ್ತಿರುವ ಘಟನೆಯನ್ನು ಖಂಡಿಸಿ ಬುಧವಾರ ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆ ಮತ್ತು ಜನಾಗ್ರಹ ಧರ್ಮಸಭೆಯಲ್ಲಿ ಅವರು ಮಾತನಾಡಿದರು.
ಧರ್ಮಸ್ಥಳದ ವಿರುದ್ಧ ಅಪಪ್ರಚಾರವಾದ ಮೊದಲ ದಿನವೇ ಎಲ್ಲರೂ ಪ್ರತಿಭಟಿಸುವ ತಾಕತ್ತು ನಮಗೆ ಬರಬೇಕಿತ್ತು. ಈಗ ಎಲ್ಲ ಮುಗಿದ ಮೇಲೆ ಪ್ರತಿಭಟನೆಗೆ ಇಳಿದಿದ್ದೇವೆ. ದಿನ ಬೆಳಗಾದರೆ ಅಪಪ್ರಚಾರ ನಡೆಸುವ ಯುಟ್ಯೂಬರ್ಗಳನ್ನು ಹಿಡಿದು ತರುವ ಕೆಲಸವನ್ನು ಪೊಲೀಸರು ಮಾಡಬೇಕಿತ್ತು. ಪೊಲೀಸರ ನಡೆಯು ಬೇಸರವನ್ನುಂಟು ಮಾಡಿದೆ. ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕು. ಈ ಕಳ್ಳರನ್ನು ಕಟ್ಟಿಹಾಕುವ ಕೆಲಸ ಮಾಡಬೇಕು ಎಂದರು.
ಹಿಂದುಪರ ಸಂಘಟನೆ ಮತ್ತು ಧರ್ಮಸ್ಥಳ ಯೋಜನೆಯ ಕಾರ್ಯಕರ್ತರು ಹಾಗೂ ಭಕ್ತರು ಸೇರಿದಂತೆ ಸಾವಿರಾರು ಜನರು ನಾಮಧಾರಿ ಸಭಾಭವನದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೆರವಣಿಗೆ ನಡೆಸಿದರು. ನಂತರ ತಹಸೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ನಾಗೇಶ ಕಾಮತ್ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ಪ.ಪಂ. ಅಧ್ಯಕ್ಷ ವಿಜಯ ಕಾಮತ, ಮಂಜುನಾಥ ನಾಯ್ಕ, ವಿವಿಧ ಸಂಘಟನೆಯ ಪ್ರಮುಖರಾದ ಜಿ.ಜಿ. ಶಂಕರ, ಶ್ರೀಕಾಂತ ನಾಯ್ಕ, ರಾಜು ಭಂಡಾರಿ, ಬಿ.ಟಿ. ಗಣಪತಿ, ಹರಿಶ್ಚಂದ್ರ ನಾಯ್ಕ, ಪ.ಪಂ. ಸದಸ್ಯರು, ಧರ್ಮಸ್ಥಳ ಯೋಜನೆಯ ಕಾರ್ಯಕರ್ತರು, ಹಿಂದು ಸಂಘಟನೆಯ ಪ್ರಮುಖರು, ಧರ್ಮಸ್ಥಳದ ಭಕ್ತರು ಇದ್ದರು. ಸಂಜಯ ಶೇಟ್ ಸ್ವಾಗತಿಸಿದರು. ವಿಶ್ವನಾಥ ನಾಯಕ ಕಾರ್ಯಕ್ರಮ ನಿರ್ವಹಿಸಿದರು. ಯೋಗೀಶ ಮೇಸ್ತ ವಂದಿಸಿದರು.