

ಮುಳಬಾಗಿಲು: ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ಕತ್ತರಿಸಿ ಸಿಇಟಿ ಪರೀಕ್ಷೆ ಕೇಂದ್ರಕ್ಕೆ ಬಿಟ್ಟಿರುವುದು, ಬೀದರ್, ತೀರ್ಥಹಳ್ಳಿ, ಸಾಗರ, ಧಾರವಾಡ ಮತ್ತಿತರ ಕೇಂದ್ರಗಳಲ್ಲಿ ಜನಿವಾರಗಳನ್ನು ಬಲವಂತವಾಗಿ ಕತ್ತರಿಸಿ ಕಸದ ಬುಟ್ಟಿಗೆ ಹಾಕಿದ್ದನ್ನು ಖಂಡಿಸಿ ತಾಲೂಕು ಬ್ರಾಹ್ಮಣರ ಸಂಘ ಮತ್ತು ಹಿಂದುಪರ ಸಂಘಟನೆಗಳ ಪದಾಧಿಕಾರಿಗಳು ಮತ್ತು ಸೋಮವಾರ ಪ್ರತಿಭಟಿಸಿದರು.
ನಗರದ ವಿಠ್ಠಲಕುಂಟೆ ಸಮೀಪದ ಶ್ರೀ ವೇದಮಾತೆ ಪಂಚಮುಖಿ ಗಾಯತ್ರಿ ದೇವಾಲಯದಿಂದ ಪ್ರತಿಭಟನಾಕಾರರು ಮೆರವಣಿಗೆ ಮೂಲಕ ಮುಖ್ಯರಸ್ತೆಗಳಲ್ಲಿ ಆಗಮಿಸಿ ಶ್ರೀ ಹನುಮಾನ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ನಂತರ ತಾಲೂಕು ಕಚೇರಿಯಲ್ಲಿ ಉಪ ತಹಸೀಲ್ದಾರ್ ಆರ್.ಕೊಂಡಪ್ಪ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ರಾಜ್ಯ ಮಾವು ಮಂಡಳಿ ಮಾಜಿ ಅಧ್ಯಕ್ಷ ಎಂ. ಕೆ.ವಾಸುದೇವ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಬ್ರಾಹ್ಮಣರ ಮತ್ತು ಹಿಂದು ವಿರೋಧಿ ನೀತಿಯಿಂದ ಕಾಶ್ಮೀರದಲ್ಲಿ ಪಂಡಿತರು ಸೇರಿ ಹಿಂದುಗಳ ಮೇಲೆ ನಿರಂತರ ದೌರ್ಜನ್ಯ, ದಬ್ಬಾಳಿಕೆ ಕಾರಣಗಳಿಂದ ಪ್ರಾಣ ಮತ್ತು ಮಾನ ಉಳಿಸಿಕೊಳ್ಳಲು ಕಾಶ್ಮೀರ ತೊರೆದು ದೇಶದ ವಿವಿಧ ಕಡೆ ಕೂಲಿ ಮಾಡುವುದು, ಶೌಚಗೃಹ ತೊಳೆಯುವುದು ಮತ್ತಿತರ ಕಾಯಕಗಳನ್ನು ಮಾಡುವಂತಾಗಿದೆ. ನೆರೆಯ ಪಾಕಿಸ್ತಾನ, ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ಅತ್ಯಾಚಾರ, ಕೊಲೆಗಳು ನಡೆಯುತ್ತಿದ್ದರೂ ಕಾಂಗ್ರೆಸ್ ಮತ್ತು ಅದರ ಬೆಂಬಲಿತ ರಾಜಕೀಯ ಪಕ್ಷಗಳು ಈ ಬಗ್ಗೆ ಮಾತನಾಡುವುದಿಲ್ಲ. ಆದುದರಿಂದ ಹಿಂದುಗಳು ಎಚ್ಚೆತ್ತು ಸಂಘಟಿತಕರಾಗಿ ಧರ್ಮ ರಕ್ಷಣೆಗಾಗಿ ಒಗ್ಗೂಡಿ ಹೋರಾಟ
ಮಾಡಬೇಕೆಂದು ಕರೆ ನೀಡಿದರು.
ಆರ್ಎಸ್ಎಸ್ ನಾರಾಯಣಪ್ಪ, ನರೇಂದ್ರ, ಆರಾಧನಾ ಸಮಿತಿ ಮಾಜಿ ಅಧ್ಯಕ್ಷ ಮಲ್ಲನಾಯಕನಹಳ್ಳಿ ಎಂ.ವಿ.ಅನಂತಪದ್ಮನಾಭರಾವ್, ಉತ್ತನೂರು ವೆಂಕಟರಾವ್ ವಿಶ್ವ ಹಿಂದು ಪರಿಷತ್ ನಗರ ಘಟಕದ ಅಧ್ಯಕ್ಷ ಎಚ್.ಎಸ್.ಹರೀಶ್, ತಾಲೂಕು ಬ್ರಾಹ್ಮಣರ ಸೇವಾ ಸಂಘದ ಅಧ್ಯಕ್ಷ ಬಲ್ಲಂ ಶ್ರೀನಿವಾಸ್ಮೂರ್ತಿ, ಖಜಾಂಚಿ ಎಸ್. ಆರ್. ಸತ್ಯನಾರಾಯಣರಾವ್, ರಾಜ್ಯ ಸಂಘದ ನಿರ್ದೇಶಕ ಆನಂದಮೂರ್ತಿ, ಮುಜರಾಯಿ ದೇವಾಲಯ ಅರ್ಚಕ ಸಂಘದ ರಾಜ್ಯ ಸಂಚಾಲಕ ಗುರು ದೀಕ್ಷಿತ್, ತಾಲೂಕು ಅಧ್ಯಕ್ಷ ಜಿ. ಮಂಜುನಾಥನ್, ಕಾರ್ಯದರ್ಶಿ ನವೀನ್ ಕುಮಾರ್, ಸಹ ಕಾರ್ಯದರ್ಶಿ ನಾಗೇಶ್ ಕುಮಾರ್, ರಘು ಭಾರದ್ವಾಜ್, ವೀರಶೈವ ಯುವ ವೇದಿಕೆ ಅಧ್ಯಕ್ಷ ಕಿಶೋರ್, ಕಾರ್ಯದರ್ಶಿ ಶೆಟ್ಟಿ ಬಣಕನಹಳ್ಳಿ ಶಿವಕುಮಾರ್, ತಾಲೂಕು ಬೋವಿ ಸಂಘದ ಅಧ್ಯಕ್ಷ ಜಿ. ಶಂಕರಪ್ಪ, ಮಾಜಿ ಯೋಧರ ಸಂಘದ ಅಧ್ಯಕ್ಷ ಗುಜ್ಜನಹಳ್ಳಿ
ನಾಗಭೂಷಣ್ ರಾವ್ ಇದ್ದರು.