

ಭಟ್ಕಳ: ಮಾನಸಿಕ ಒತ್ತಡ ಇರುವವರ ಸಂಖ್ಯೆ ಹೆಚ್ಚುತ್ತಿದೆ. ನಮ್ಮಲ್ಲಿನ ಭಾವೋದ್ವೇಗ ಹೆಚ್ಚಿಸಿ ಮನಸ್ಸಿನ ಸಮತೋಲನ ಹಾಳು ಮಾಡಿಕೊಳ್ಳಲು ನಾವೆೇ ಕಾರಣರಾಗುತ್ತಿದ್ದೇವೆ. ಉದ್ವೇಗದ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆೆ ಎಂದು ಯೋಗಬನ ವೈದ್ಯ ವಿವೇಕ ಉಡುಪ ಆತಂಕ ವ್ಯಕ್ತಪಡಿಸಿದರು.
ಪಟ್ಟಣದ ಡಿವೈನ್ ಪಾರ್ಕ್ ಟ್ರಸ್ಟ್ ಅಂಗಸಂಸ್ಥೆಯಾದ ಉತ್ತರ ಕನ್ನಡ ಜಿಲ್ಲೆಯ ವಿವೇಕ ಜಾಗೃತ ಬಳಗಗಳ ಸಹಯೋಗದಲ್ಲಿ ನಾಗಯಕ್ಷೆ ಸಭಾಭವನದಲ್ಲಿ ಹಮ್ಮಿಕೊಂಡಿದ್ದ 22ನೇ ಯೋಗ ಪರ್ಯಟನೆ ಸತ್ಸಂಗ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿಂದು ಧರ್ಮೀಯರು ಧರ್ಮಶ್ರದ್ಧೆ ಬೆಳೆಸಿಕೊಳ್ಳಬೇಕಾದ ಬಹುದೊಡ್ಡ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ಆಗದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಜಿಲ್ಲೆಯ ಜನರ ಹಕ್ಕಾಗಿದ್ದು, ಅದನ್ನು ಜವಾಬ್ದಾರಿ ಹೊತ್ತ ಸರ್ಕಾರ ಹಾಗೂ ಜನಪ್ರತಿನಿಧಿಗಳು ಅತೀ ಶೀಘ್ರ ನಿರ್ಮಾಣ ಮಾಡಲು ದೇವರು ಪ್ರೇರಣೆ ನೀಡಲಿ ಎಂದರು.
ಹೊನ್ನಾವರ, ಕುಮಟಾ, ಅಂಕೋಲಾ ಮತ್ತು ಕಾರವಾರದಿಂದ ವಿವೇಕ ಜಾಗೃತ ಬಳಗದ ಸಾವಿರಕ್ಕೂ ಹೆಚ್ಚೂ ಭಕ್ತರು ಕಾರ್ಯಕ್ರಮದಲ್ಲಿ ಹಾಜರಿದ್ದರು. ವಿವೇಕ ಜಾಗೃತ ಬಳಗದ ಪ್ರಮುಖರಾದ ಎಂ.ಎನ್. ನಾಯ್ಕ, ಜಿ.ಪಿ. ರಾಜಶೇಖರ, ಎಂ.ಎಂ. ಗೌಡ ಹಾಗೂ ಸುರೇಶ ಅಂಬಿಗ, ಇತರರಿದ್ದರು.