

ಬಾಗಲಕೋಟೆ: ಐಪಿಎಲ್ ಕ್ರಿಕೆಟ್ ಸಂಭ್ರಮಾಚರಣೆ ವೇಳೆ ದುರ್ಘಟನೆ ನಡೆಯಲು ರಾಜ್ಯ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆ ಎಂದು ಆರೋಪಿಸಿ ಬಿಜೆಪಿ ಬಾಗಲಕೋಟೆ ಮತಕ್ಷೇತ್ರ ವತಿಯಿಂದ ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ಶುಕ್ರವಾರ ಸಂಜೆ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾ ಮೆರವಣಿಗೆ ಮೂಲಕ ಬಸವೇಶ್ವರ ವೃತ್ತಕ್ಕೆ ಆಗಮಿಸಿದ ಬಿಜೆಪಿ ಕಾರ್ಯಕರ್ತರು, ಮುಖಂಡರು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ನೈತಿಕ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಮಾಜಿ ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಕ್ರಿಕೆಟ್ ಸಂಭ್ರಮಾಚರಣೆಗೆ ಅಗತ್ಯ ಸಿದ್ಧತೆ ಮಾಡಿಕೊಂಡಿರಲಿಲ್ಲ. ತರಾತುರಿಯಲ್ಲಿ ಮಾಡಿದ ಕಾರ್ಯಕ್ರಮದಿಂದ ಅಮಾಯಕ 11 ಜನ ಪ್ರಾಣ ಕಳೆದುಕೊಂಡರು. ಲಕ್ಷಾಂತರ ಜನ ಒಂದೇ ಸಮಯಕ್ಕೆ ಸೇರುತ್ತಾರೆ ಅಂತ ಗೊತ್ತಿದ್ದರೂ ಸರ್ಕಾರ ಸಾರ್ವಜನಿಕರ ಸುರಕ್ಷತೆಗೆ ಮುಂಜಾಗ್ರತೆ ತೆಗೆದುಕೊಳ್ಳಲಿಲ್ಲ. ಈಗ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಅಧಿಕಾರಿಗಳನ್ನು ಅಮಾನತ್ತುಗೊಳಿಸಿರುವುದು ಖಂಡನೀಯ ಎಂದು ಕಿಡಿಕಾರಿದರು.
ಮುಖಂಡರಾದ ಡಾ. ಎಂ.ಎಸ್. ದಡ್ಡೆನವರ, ಸತ್ಯನಾರಾಯಣ ಹೇಮಾದ್ರಿ, ಯಲ್ಲಪ್ಪ ಬೆಂಡಿಗೇರಿ, ಬಸವರಾಜ ಯಂಕಂಚಿ, ಲಕ್ಷ್ಮೀನಾರಾಯಣ ಕಾಸಟ್, ಶೋಭಾ ರಾವ, ಸ್ಮೀತಾ ಕಲಬುರ್ಗಿ, ಸ್ಮೀತಾ ಪವಾರ, ಶಶಿಕಲಾ ಮಜ್ಜಗಿ ಇತರರಿದ್ದರು.