ಜನರ ಕಲ್ಯಾಣಕ್ಕಾಗಿ ಮತ್ತೆ ಪಿಎಂ ಆಗಲಿ

jyp bjp
ಜಯಪುರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರ ಸಮನ್ವಯ ಸಭೆ ನಡೆಯಿತು. ಮುಖಂಡರಾದ ಮಣಿಕಂಠನ್, ಎನ್.ಕೆ.ಉದಯ್ , ರತೀಶ್ ಕುಕ್ಕುಡಿಗೆ, ಶಾಂತರಾಜ್ ಜೈನ್ ಇತರರಿದ್ದರು.
Published on

ಜಯಪುರ: ದೇಶದ ರಕ್ಷಣಾ ವ್ಯವಸ್ಥೆಯನ್ನು ವಿಶ್ವ ಮಟ್ಟದಲ್ಲಿ ಬಲಿಷ್ಠಗೊಳಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿ ಆಯ್ಕೆ ಮಾಡಬೇಕು ಎಂದು ಬಿಜೆಪಿ ಮುಖಂಡ ಮಣಿಕಂಠನ್ ಕಂದಸ್ವಾಮಿ ಹೇಳಿದರು.

ಶನಿವಾರ ಬಿಜೆಪಿ-ಜೆಡಿಎಸ್ ಮುಖಂಡರ ಸಮನ್ವಯ ಸಭೆಯಲ್ಲಿ ಮಾತನಾಡಿ, ಆಯುಷ್ಮಾನ್, ಜಲಜೀವನ್ ಯೋಜನೆಯಂಥ ಮಹತ್ವದ ಯೋಜನೆಗಳನ್ನು ಜಾರಿಗೊಳಿಸಿ ಜನರಿಗಾಗಿ ದುಡಿಯುತ್ತಿರುವ ನರೇಂದ್ರ ಮೋದಿ ಅವರ ಕೈ ಬಲಪಡಿಸುವ ಸಲುವಾಗಿ ಬಿಜೆಪಿ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂದರು.
ಜನಧನ್, ಮಹಿಳಾ ಸಬಲೀಕರಣ, ಮೇಕ್ ಇನ್ ಇಂಡಿಯಾ ಸೇರಿದಂತೆ ಅನೇಕ ಕಲ್ಯಾಣ ಯೋಜನೆಗಳನ್ನು ಪ್ರಾರಂಭಿಸಿದ ನರೇಂದ್ರ ಮೋದಿ ಅವರನ್ನು ಮೂರನೇ ಬಾರಿ ಪ್ರಧಾನಿಯಾಗಿ ಮಾಡಬೇಕಿದೆ ಎಂದು ತಿಳಿಸಿದರು.
ಜೆಡಿಎಸ್ ಮುಖಂಡ ಉದಯ್ ಮಾತನಾಡಿ, ಜಯಪುರದಲ್ಲಿ ಏ.8ರಂದು ಮೈತ್ರಿ ಪಕ್ಷಗಳ ಸಮಾವೇಶ ನಡೆಯಲಿದ್ದು, ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಡಿ.ಎನ್.ಜೀವರಾಜ್, ಜೆಡಿಎಸ್ ಮುಖಂಡ ಸುಧಾಕರ್ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ. ಪ್ರತಿ ಮತಗಟ್ಟೆಯಿಂದ ಕಾರ್ಯಕರ್ತರು ಮತದಾರರನ್ನು ಕರೆತರುವ ಮೂಲಕ ಅಭ್ಯರ್ಥಿ ಗೆಲುವಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಬೂತ್ ಮಟ್ಟದಿಂದ ಒಟ್ಟಾಗಿ ಕೆಲಸ ಮಾಡಬೇಕು. ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಹೆಚ್ಚು ಅಂತರದಿಂದ ಗೆಲ್ಲಿಸುವ ಯೋಜನೆ ರೂಪಿಸಬೇಕು ಎನ್ನುವ ನಿರ್ಣಯವನ್ನು ಸಮನ್ವಯ ಸಭೆಯಲ್ಲಿ ಕೈಗೊಳ್ಳಲಾಯಿತು.
ಬಿಜೆಪಿ ಮೇಗುಂದಾ ಹೋಬಳಿ ಕಾರ್ಯದರ್ಶಿ ಹಾಲಪ್ಪ ಶಿಡ್ಲೆಮನೆ , ಜೆಡಿಎಸ್ ಮುಖಂಡರಾದ ಪ್ರಕಾಶ್ ಆನ್ಮನೆ , ಶಾಂತರಾಜ್, ಬಿಜೆಪಿ ಸಂತೋಷ್, ಶ್ರೇಯಸ್ ಹಾಗೂ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net