ಆರೋಗ್ಯವಂತರು ರಕ್ತದಾನ ಮಾಡಲಿ

oppo_16
oppo_16
Published on


ಮದ್ದೂರು : ರಕ್ತಕ್ಕೆ ಪರ್ಯಾಯವಾದ ವಸ್ತು ಪ್ರಪಂಚದಲ್ಲಿ ಬೇರ‌್ಯಾವುದು ಇಲ್ಲದ ಕಾರಣ ಆರೋಗ್ಯವಂತರು ಕಡ್ಡಾಯವಾಗಿ ರಕ್ತದಾನ ಮಾಡುವ ಮೂಲಕ ಸಂಕಷ್ಟದಲ್ಲಿರುವ ಜೀವಗಳನ್ನು ಉಳಿಸಬೇಕು ಎಂದು ಕೃಷ್ಣೇಗೌಡ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಎಚ್.ಕೆ.ನಂದೀಶ್‌ಗೌಡ ಸಲಹೆ ನೀಡಿದರು.


ತಾಲೂಕಿನ ಹೆಮ್ಮನಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಶನಿವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕ, ಸರ್ಕಾರಿ ರಕ್ತ ನಿಧಿ ಕೇಂದ್ರ ಮಿಮ್ಸ್, ಗುರುಶಾಂತಪ್ಪ ಸರ್ಕಾರಿ ಆಸ್ಪತ್ರೆ ಮತ್ತು ಹಾಗೂ ಹೆಮ್ಮನಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರಕ್ಕೆ ಸ್ವತಃ ರಕ್ತದಾನ ಮಾಡುವ ಮೂಲಕ ಚಾಲನೆ ನೀಡಿದರು.


ದಾನ ದಾನಗಳಲ್ಲಿ ರಕ್ತದಾನವು ಶ್ರೇಷ್ಠ ದಾನವಾಗಿದ್ದು, ರಕ್ತದಾನ ಮಾಡುವ ಮೂಲಕ ಜೀವರಕ್ಷಣೆಗೆ ಮುಂದಾಗಬೇಕು. ನಿಗದಿತವಾಗಿ ರಕ್ತದಾನ ಮಾಡುವ ವ್ಯಕ್ತಿಯ ಆರೋಗ್ಯವು ವೃದ್ಧಿಸುತ್ತದೆ ಎಂದು ಸಲಹೆ ನೀಡಿದರು.


ಅಪಘಾತ ಸೇರಿದಂತೆ ಹಲವು ತುರ್ತು ಸಂದರ್ಭಗಳಲ್ಲಿ ರಕ್ತದ ಅಗತ್ಯವಿರುತ್ತದೆ. ಅಂತಹ ಸಂದರ್ಭಗಳಲ್ಲಿ ರಕ್ತವು ಸಿಕ್ಕಿದರೆ ಮಾತ್ರ ಅಮೂಲ್ಯವಾದ ಜೀವಗಳನ್ನು ಉಳಿಸಬಹುದಾಗಿದ್ದು ಅದನ್ನು ಮನಗಂಡು ರಕ್ತದಾನ ಮಾಡಬೇಕು ಎಂದರು.


ಜಿಪಂನ ಯೋಜನಾ ನಿರ್ದೇಶಕ ಸಂಜೀವಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲೂಕಿನ ಹೆಮ್ಮನಹಳ್ಳಿ ಗ್ರಾಪಂ ಯು ಹಲವಾರು ವಿಷಯಗಳಿಂದ ಗಮನಸೆಳೆದಿದ್ದು, ಉತ್ತಮ ಕೆಲಸಗಳಿಂದಾಗಿ ರಾಷ್ಟ್ರೀಯ ಹಾಗೂ ರಾಜ್ಯ ಪ್ರಶಸ್ತಿಗಳನ್ನೂ ಪಡೆದುಕೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಶಿಬಿರದಲ್ಲಿ 78 ಯೂನಿಟ್ ರಕ್ತ ಸಂಗ್ರಹಣೆಯಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಏಡ್ಸ್ ಹಾಗೂ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಆಶಾಲತಾ, ತಾಪಂ ಇಒ ರಾಮಲಿಂಗಯ್ಯ, ನರೇಗಾ ಅಧಿಕಾರಿಗಳಾದ ಮಂಜುನಾಥ್, ಪಿಡಿಒ ಲೀಲಾವತಿ, ಡಾ. ಭಾರ್ಗವಿ, ಗ್ರಾಪಂ ಅಧ್ಯಕ್ಷೆ ವೀಣಾ, ಉಪಾಧ್ಯಕ್ಷ ಅಪ್ಪಾಜೀಗೌಡ, ಸದಸ್ಯರುಗಳಾದ ಸೌಭಾಗ್ಯಾ, ಕಮಲಾಕ್ಷಿ, ಜ್ಯೋತಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net