ವಿಶ್ವವಿದ್ಯಾಲಯಗಳ ಅತಿಥಿ ಉಪನ್ಯಾಸಕರಿಗೂ ಸಮಾನ ವೇತನ ನೀಡಲಿ

maritibbegowda1-
Published on

ಮೈಸೂರು: ವಿಶ್ವವಿದ್ಯಾಲಯ, ಘಟಕ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೂ ಸರ್ಕಾರವೇ ಯುಜಿಸಿ ನಿಯಮಾವಳಿ ಪ್ರಕಾರ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿ ಸೇವಾ ಭದ್ರತೆ ಕಲ್ಪಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಆಗ್ರಹಿಸಿದ್ದಾರೆ.


ಕಾಲೇಜು ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಪ್ರಥಮ ದರ್ಜೆ ಕಾಲೇಜು, ಇಂಜಿನಿಯರಿಂಗ್, ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ವೇತನ ಪರಿಷ್ಕರಣೆ, ನಿವೃತ್ತಿ ಸಹಾಯಧನ, ವೈದ್ಯಕೀಯ ಸೌಲಭ್ಯ, ರಜೆ, ಭವಿಷ್ಯತ್ತಿನ ನೇಮಕಾತಿಗೆ ಕೃಪಾಂಕ ನೀಡುವ ಮೂಲಕ ಸೇವಾ ಭದ್ರತೆಗೆ ಅವಕಾಶ ಕಲ್ಪಿಸಿ ಕೊಡಲಾಗಿದೆ. ಇದು ರಾಜ್ಯ ಸರ್ಕಾರದ ಸ್ವಾಗತಾರ್ಹ ಕ್ರಮ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.


ರಾಜ್ಯದಲ್ಲಿನ ಸರ್ಕಾರಿ ವಿಶ್ವವಿದ್ಯಾಲಯ, ವಿವಿ ಘಟಕ ಕಾಲೇಜುಗಳಲ್ಲಿ ಶೇ.60ರಷ್ಟು ಬೋಧಕ ಹುದ್ದೆಗಳು ದೀರ್ಫಕಾಲದಿಂದ ಖಾಲಿ ಇವೆ. ಮೈಸೂರು ವಿವಿಯಲ್ಲಿ ಮಂಜೂರಾದ 604 ಬೋಧಕ ಹುದ್ದೆಗಳಲ್ಲಿ 440 ಹುದ್ದೆಗಳು ಖಾಲಿ ಇದೆ. ಈ ಸಮಸ್ಯೆ ನಿವಾರಣೆಗಾಗಿ ನಿಯೋಜನೆಗೊಂಡಿರುವ ಅತಿಥಿ ಉಪನ್ಯಾಸಕರಿಗೆ ಸರ್ಕಾರ ವೇತನ ನೀಡುತ್ತಿಲ್ಲ. ಬದಲಿಗೆ ಇವರಿಗೆ ವಿವಿ ಆಂತರಿಕ ಸಂಪನ್ಮೂಲಗಳಿಂದ ವೇತನ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.


ರಾಜ್ಯ ಸರ್ಕಾರ ಅಥವಾ ಯುಜಿಸಿ ವತಿಯಿಂದ ಯಾವುದೇ ವಿವಿಗಳಿಗೂ ಯಾವುದೇ ರೀತಿಯ ಅನುದಾನ ನೀಡುತ್ತಿಲ್ಲ. ಬಡ ವಿದ್ಯಾರ್ಥಿಗಳ ಶುಲ್ಕದಿಂದಲೇ ವಿವಿ ಆಡಳಿತ ನಿರ್ವಹಣೆ ನಡೆಯುತ್ತಿದೆ. ಇದರಿಂದಾಗಿ ಎಲ್ಲ ವಿವಿಗಳೂ ತೀರ ಆರ್ಥಿಕ ಸಂಕಷ್ಟದಲ್ಲಿವೆ. ಸಂಶೋಧನೆ, ಅಭಿವೃದ್ಧಿಗೆ, ಅತಿಥಿ ಉಪನ್ಯಾಸಕರ ವೇತನಕ್ಕೂ ಸಂಚಕಾರ ಉಂಟಾಗಿದೆ. ಇವರಿಗೆ ವಿವಿಗಳು ವೇತನ ನೀಡುವುದು ಕಷ್ಟಕರವಾಗಿದೆ. ಆದ್ದರಿಂದ ಈ ಅತಿಥಿ ಉಪನ್ಯಾಸಕರ ನೆರವಿಗೂ ಸರ್ಕಾರ ಬರಬೇಕು ಎಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net