ಕರಾಳ ಮಸೂದೆಗಳನ್ನು ಹಿಂಪಡೆಯಲಿ ಸರ್ಕಾರ

SINDHNOOR 01
ಸಿಂಧನೂರು ಆಡಳಿತಸೌಧದಲ್ಲಿ ಶಿರಸ್ತೇದಾರರಾದ ವಾಣಿಶ್ರೀಗೆ ಅಖಿಲ ಭಾರತ ಕಿಸಾನ್ ಸಭಾ ಜಿಲ್ಲಾ ಘಟಕದಿಂದ ಮನವಿ ಸಲ್ಲಿಸಲಾಯಿತು.ಕಿಸಾನ್ ಸಭಾದ ಪ್ರಮುಖರಾದ ವೆಂಕನಗೌಡ ಗದ್ರಟಗಿ, ಡಿ.ಎಚ್.ಕಂಬಳಿ, ಬಾಷುಮಿಯಾ, ಚಂದ್ರಶೇಖರ ಕ್ಯಾತ್ನಟ್ಟಿ, ಜಗದೀಶ ಸುಕಾಲಪೇಟೆ ಇದ್ದರು.
Published on

ಸಿಂಧನೂರು: ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಕಾಂಗ್ರೆಸ್ ರೈತರ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕೆಂದು ಒತ್ತಾಯಿಸಿ ಅಖಿಲ ಭಾರತ ಕಿಸಾನ್ ಸಭಾ ಜಿಲ್ಲಾ ಘಟಕದಿಂದ ಸ್ಥಳೀಯ ಆಡಳಿತಸೌಧದಲ್ಲಿ ಶಿರಸ್ತೇದಾರರಾದ ವಾಣಿಶ್ರೀಗೆ ಶನಿವಾರ ಮನವಿ ಸಲ್ಲಿಸಲಾಯಿತು.

ಸಂಪುಟದ ಒಪ್ಪಿಗೆ

ಕೃಷಿ ವಿರೋಧಿ ಮೂರು ಕರಾಳ ಮಸೂದೆಗಳನ್ನು ಹಿಂಪಡೆಯುವ ಬಗ್ಗೆ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಬಳಕೆ ಮಿತಿ ಏರಿಕೆ, ಕೃಷಿ ಬಡ್ಡಿರಹಿತ ಸಾಲದ ಮಿತಿಯನ್ನು ರೂ.3 ರಿಂದ 10 ಲಕ್ಷಗಳಿಗೆ ಏರಿಕೆ, ಸೂಕ್ತ ಬೆಂಬಲ ಬೆಲೆ, ಮಾರುಕಟ್ಟೆ ವಿಸ್ತರಣೆಯಂತಹ ಭರವಸೆಗಳನ್ನು ಆದ್ಯತೆ ಮೇರೆಗೆ ಸಚಿವ ಸಂಪುಟದ ಒಪ್ಪಿಗೆ ಪಡೆದು ಆದೇಶ ನೀಡಬೇಕು.

ಇದನ್ನೂ ಓದಿ:ವಿಮುಕ್ತ ದೇವದಾಸಿಯರಿಗೆ ಹಕ್ಕುಪತ್ರ ವಿತರಣೆ
ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡಿಕೊಂಡಿರುವ ಎಲ್ಲ ಅರ್ಹ ಭೂರಹಿತ ಸಾಗುವಳಿದಾರರ ಉಳಿಮೆ ಹಕ್ಕನ್ನು ಸರ್ಕಾರಿ ಭೂಮಿಯ ಗೇಣಿದಾರಿಕೆ ಎಂದು ಪರಿಗಣಿಸಿ, ಹೊಸ ಮಾನದಂಡ ನಿಗದಿಪಡಿಸಿ ಅರ್ಜಿ ಸ್ವೀಕರಿಸಿ ಹಕ್ಕುಪತ್ರ ನೀಡಬೇಕು.


ರೈತ ಕೃಷಿ ಕಾರ್ಮಿಕರು ಭೂ ಒಡೆತನ ಕೋರಿ ಈಗಾಗಲೇ ಸಲ್ಲಿಸಿರುವ ಫಾರಂ 94(ಸಿ), ಫಾರಂ 50, 53, 57 ಅರ್ಜಿಗಳನ್ನು ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡ, ಇತರೆ ಸಾಂಪ್ರದಾಯಿಕ ಅರಣ್ಯವಾಸಿಗಳ ಅರಣ್ಯ ಹಕ್ಕು ಮಾನ್ಯತಾ ಕಾನೂನು 2008-09ರ ಅಡಿಯಲ್ಲಿ ಸಲ್ಲಿಸಲಾದ ಅರ್ಜಿಗಳನ್ನು ಪುನರ್ ಪರಿಶೀಲಿಸಲು ಅವಕಾಶ ನೀಡಬೇಕು.

ಸರ್ಕಾರಿ ಭೂಮಿ ಒತ್ತುವರಿಯನ್ನು ಗುತ್ತಿಗೆ ನೀಡುವ ಬಗ್ಗೆ ಹಿಂದಿನ ಕಂದಾಯ ಸಚಿವರ ಪ್ರಸ್ತಾವನೆಯನ್ನು ಪುನರ್ ಪರಿಶೀಲಿಸಿ ಸಾರ್ವಜನಿಕ ಬಳಕೆಗೆ ಅಗತ್ಯವಾದಷ್ಟು ಭೂಮಿ ಕಾಯ್ದಿರಿಸಿ ಮತ್ತು ಸ್ಥಳೀಯ ನಿವೇಶನರಹಿತರ ಬೇಡಿಕೆಗೆ ಮೀಸಲಿರಿಸಿ, ಉಳಿದ ಒತ್ತುವರಿ ಭೂಮಿ ಹಾಗೂ ಹಿಡುವಳಿ ಭೂಮಿ ಎರಡನ್ನು ಸೇರಿಸಿ ಒಟ್ಟು 25 ಎಕರೆ ಮಿತಿಯೊಳಗೆ 25 ವರ್ಷ ಮೀರದ ಅವಧಿಗೆ ಗುತ್ತಿಗೆ ನೀಡಲು ವಾರ್ಷಿಕ ಗುತ್ತಿಗೆ ಮೊತ್ತ ನಿಗದಿ ಪಡಿಸಬೇಕು ಎನ್ನುವ ಇತರ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net