

ಮೂಡಿಗೆರೆ: ಅರ್ಧ ಶತಮಾನಗಳ ಹಿಂದೆ ನಿರ್ಮಿಸಿರುವ ಸರ್ಕಾರಿ ಶಾಲೆ ಕಟ್ಟಡಗಳು ಕುಸಿಯುವ ಹಂತದಲ್ಲಿದ್ದು, ಅಂತಹ ಶಾಲೆಗಳಲ್ಲಿ ಒಂದೊಂದು ಕೊಠಡಿ ನಿರ್ಮಿಸುವ ಬದಲು ಪೂರ್ಣವಾಗಿ ಸುಸಜ್ಜಿತ ಕಟ್ಟಡ ನಿರ್ಮಿಸಿದರೆ ಸರ್ಕಾರಿ ಶಾಲೆಗಳ ಬಗ್ಗೆ ಪಾಲಕರಲ್ಲಿ ಆತ್ಮಗೌರವ ಹೆಚ್ಚಾಗುತ್ತದೆ ಎಂದು ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಹೇಳಿದರು.
ಜಾವಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಭಾರತೀಯ ಶಿಕ್ಷಣ ವ್ಯವಸ್ಥೆ ಆಧುನಿಕ ಯುಗದತ್ತ ದಾಪುಗಾಲಿಟ್ಟಿದೆ. ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ, ಶೈಕ್ಷಣಿಕ ಪರಿಕರ, ಸಮವಸ್ತ್ರ ಎಲ್ಲವನ್ನು ಸರ್ಕಾರ ಒದಗಿಸುತ್ತಿದೆ. ಆದರೆ ಸುಸಜ್ಜಿತ ಕಟ್ಟಡ ನಿರ್ಮಾಣವಾಗುತ್ತಿಲ್ಲ. ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಸರ್ಕಾರಿ ಶಾಲೆಗಳಿಗೆ ಅತ್ಯುತ್ತಮ ಕಟ್ಟಡದ ಅಗತ್ಯವಿದೆ. ಈ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಿ ಸರ್ಕಾರದ ಗಮನ ಸೆಳೆಯಲಾಗಿದೆ. ಜಾವಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ದುರಸ್ತಿಗೆ ತಮ್ಮ ಅನುದಾನದಿಂದ 2 ಲಕ್ಷ ರೂ. ನೀಡುವುದಾಗಿ ಘೋಷಿಸಿದರು.
ಜಾವಳಿ ಗ್ರಾಪಂ ಅಧ್ಯಕ್ಷ ಪ್ರದೀಪ್,ಎಸ್‌ಡಿಎಂಸಿ ಅಧ್ಯಕ್ಷ ಸುರೇಶ್, ಾಳೂರು ಹೋಬಳಿ ಬಿಜೆಪಿ ಅಧ್ಯಕ್ಷ ಮಂಜುನಾಥ್, ಮುಖಂಡರಾದ ಶಶಿಧರ, ಕೃಷ್ಣ ಟೈಲರ್, ಮನೋಜ್, ಶಿಕ್ಷಕರಾದ ಆದಿತ್ಯ, ಆಶಾ, ಗಂಗಮ್ಮ, ತೇಜಸ್ವಿನಿ ಇತರರಿದ್ದರು.