

ಮೂಡಿಗೆರೆ: ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಸರ್ಕಾರಿ ಶಾಲೆಗಳು ಹಿಂದೆ ಬೀಳದಂತೆ ದಾನಿಗಳ ನೆರವು ಪಡೆದು ಉತ್ತಮ ಕಟ್ಟಡ ನಿರ್ಮಿಸಿದರೆ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬದ ಮಕ್ಕಳು ಕೂಡ ಉತ್ತಮ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಪಡೆಯಲು ಸಾಧ್ಯವಿದೆ ಎಂದು ಮಾಜಿ ಸಚಿವೆ ಮೋಟಮ್ಮ ಹೇಳಿದರು.
ಮುದ್ರೆಮನೆ ಕಾಫಿ ಕ್ಯೂರಿಂಗ್ ಮಾಲೀಕ ಬಿ.ಎಸ್.ಸಂತೋಷ್ ಅವರ 2.18 ಕೋಟಿ ರೂ. ಹಾಗೂ ಸರ್ಕಾರದ ವಿವೇಕ ಯೋಜನೆಯ 56 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಮುತ್ತಿಗೆಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, 50 ರಿಂದ 60 ವರ್ಷದ ಹಿಂದೆ ನಿರ್ಮಿಸಿರುವ ಸರ್ಕಾರಿ ಶಾಲಾ ಕಟ್ಟಡಗಳು ಕೆಲವೆಡೆ ಶಿಥಿಲಾವಸ್ಥೆ ತಲುಪಿದೆ ಎಂದರು.
ದುರಸ್ತಿಗಾಗಿ ಸರ್ಕಾರ ಆಗಾಗ ಅನುದಾನ ಮಂಜೂರು ಮಾಡುತ್ತದೆ. ಹೊಸ ಕಟ್ಟಡ ನಿರ್ಮಾಣಕ್ಕೂ ಅನುದಾನ ನೀಡುತ್ತದೆ. ಸರ್ಕಾರ ಎಲ್ಲಾ ಶಾಲಾ ಕಟ್ಟಡಗಳನ್ನು ಹಂತ ಹಂತವಾಗಿ ಮೇಲ್ದರ್ಜೆಗೇರಿಸ ಬೇಕು. ಆಧುನಿಕ ಕಾಲಕ್ಕೆ ತಕ್ಕಂತೆ ಸರ್ಕಾರಿ ಶಾಲೆಗಳನ್ನು ಸನ್ನದ್ದಗೊಳಿಸಬೇಕು. ಗುಣಮಟ್ಟದ ಶಿಕ್ಷಣ ದೊರಕಿದಾಗ, ದೂರದ ಊರಿನಿಂದ ಕೂಡ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗೆ ಸೇರ್ಪಡೆಗೊಂಡು ಶಾಲೆ ಮುಚ್ಚುವ ಹಂತದಿಂದ ಪಾರಾಗಬಹುದು ಎಂದರು.
ಮುದ್ರೆಮನೆ ಕಾಫಿ ಕ್ಯೂರಿಂಗ್ ಮಾಲಿಕ ಸಂತೋಷ್ ತಮ್ಮ ದುಡಿಮೆಯ ಹಣದಲ್ಲಿ ಶಾಲೆ ರ್ಮಿಸಿರುವುದು ಮಾದರಿಯಾಗಿದೆ. ಇದೇ ರೀತಿ ಎಲ್ಲ ಉದ್ಯಮಿಗಳು ಆಯಾ ವ್ಯಾಪ್ತಿಯ ಶಾಲೆ, ಕಾಲೇಜ್ ಕಟ್ಟಡಗಳನ್ನು ನಿರ್ಮಿಸಿದರೆ ಸರ್ಕಾರಕ್ಕೂ ಹೊರೆ ತಪ್ಪಿದಂತಾಗುತ್ತದೆ ಎಂದು ತಿಳಿಸಿದರು.