

ಉಪ್ಪಿನಬೆಟಗೇರಿ: ಗ್ರಾಮೀಣ ಭಾಗದ ಸರ್ಕಾರಿ ಶಾಲೆ ಮಕ್ಕಳು ಇಂಗ್ಲಿಷ್ ಮಾತನಾಡಲು ಮತ್ತು ತಿಳಿದುಕೊಳ್ಳಲು ಅವಶ್ಯವಾಗಿದ್ದು, ಅದನ್ನು ದೇಶಪಾಂಡೆ ಫೌಂಡೇಷನ್ ಪೂರೈಸಲು ಮುಂದಾಗಿರುವುದು ಸಂತಸದ ಸಂಗತಿ ಎಂದು ಗ್ರಾಪಂ ಅಧ್ಯಕ್ಷ ಬಸೀರಅಹ್ಮದ್ ಮಾಳಗಿಮನಿ ಹೇಳಿದರು.
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ಗುರುವಾರ ಹುಬ್ಬಳ್ಳಿಯ ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ ಅರ್ಲಿ ಸ್ಪಾರ್ಕ್ ಇಂಗ್ಲಿಷ್ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಫೌಂಡೇಷನ್ ಶಿಕ್ಷಕಿ ಸುಮಾ ಕೊಡಗಾನೂರ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳಲ್ಲಿ ಸೂಕ್ತ ಕಲಿಕಾ ವಾತಾವರಣ ಸೃಷ್ಟಿಸುವುದು ನಮ್ಮ ಉದ್ದೇಶವಾಗಿದೆ. ಇತ್ತೀಚಿನ ದಿನಗಳಲ್ಲಿ ಪಟ್ಟಣ ಪ್ರದೇಶದ ಮಕ್ಕಳನ್ನು ಗಮನಿಸಿದಾಗ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇಂಗ್ಲಿಷ್ ವಿಷಯದಲ್ಲಿ ಹಿಂದೆ ಉಳಿದಿದ್ದಾರೆ. ಕಿರಿಯ ಪ್ರಾಥಮಿಕ ವಿದ್ಯಾರ್ಥಿಗಳು ಇಂಗ್ಲಿಷ್ನಲ್ಲಿ ಮಾತನಾಡಬೇಕು ಎಂಬ ಗುರಿಯೊಂದಿಗೆ 2018ರಲ್ಲಿ ಈ ಕಾರ್ಯಕ್ರಮ ಜಾರಿಗೆ ತರಲಾಗಿದೆ. ಪ್ರಥಮವಾಗಿ ಶಾಲಾ ಶಿಕ್ಷಕರಿಗೆ ತರಬೇತಿ ನೀಡಿ ನಂತರ ಆಯಾ ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡಲಾಗುವುದು. ಈ ಪಾಠದಿಂದ ಚಿಕ್ಕ ಮಕ್ಕಳು ಇಂಗ್ಲಿಷ್ ಭಾಷೆ ಕಲಿಯಲು ಅನುಕೂಲವಾಗಲಿದೆ ಎಂದರು.
ಉಪ್ಪಿನಬೆಟಗೇರಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಹೇಮಲತಾ ಢಗೆ, ಎಸ್ಡಿಎಂಸಿ ಅಧ್ಯಕ್ಷ ರುದ್ರಪ್ಪ ಆಯಟ್ಟಿ ,ಉಪಾಧ್ಯಕ್ಷ ಯಲ್ಲಪ್ಪ ದಿವಟಗಿ, ಗ್ರಾಪಂ ಸದಸ್ಯ ಮಡಿವಾಳಪ್ಪ ಶಿಂದೋಗಿ, ಕಲ್ಲಪ್ಪ ಯಮೋಜಿ, ಸುಮಿತ್ರಾ ಬೆಳವಡಿ, ನಂದಾ ಹತ್ತಿಕಟಗಿ, ಕಲ್ಲಪ್ಪ ಯಾವಗಲ್, ಫಕೀರಪ್ಪ ಶಿವಳ್ಳಿ, ಪ್ರಧಾನ ಗುರು ಕೆ.ವಿ.ಕಾಮತ, ಶಿಕ್ಷಕ ಬಿ.ಎಸ್. ಸತ್ಯನ್ನವರ, ಎಸ್.ಬಿ. ಹದಳಗಿ, ಪುಷ್ಪಾ ಬಾಳಂಬೀಡ, ಲಕ್ಷ್ಮೀ ಶಿಂಧೆ, ಇತರರು ಉಪಸ್ಥಿತರಿದ್ದರು. ಶಿಕ್ಷಕಿ ವಿಜಯಲಕ್ಷ್ಮೀ, ಉಮೇಶ ಹಂಚಿನಾಳ ಕಾರ್ಯಕ್ರಮ ನಿರ್ವಹಿಸಿದರು.